ಮುಝಾಫರ್‌ನಗರ: 9 ವರ್ಷ ಹಿಂದಿನ ಕೊಲೆ ಪ್ರಕರಣದಲ್ಲಿ 7 ಮಂದಿಗೆ ಮರಣದಂಡನೆ

Update: 2018-11-20 15:47 GMT

ಮುಝಾಫರ್‌ನಗರ (ಉ.ಪ್ರ.),ನ.21: ಒಂಭತ್ತು ವರ್ಷಗಳ ಹಿಂದೆ ಮುಝಾಫರ್‌ನಗರ ಜಿಲ್ಲೆಯ ಹರ್ಸೊಲಿ ಗ್ರಾಮದಲ್ಲಿ  ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿದೆ.

ಕೊಲೆ, ಹತ್ಯೆ ಯತ್ನ ಹಾಗೂ ಗಲಭೆ ನಡೆಸಿದ ಮತ್ತು ಮಾರಕಾಯುಧಗಳನ್ನು ಹೊಂದಿದ ಆರೋಪದಲ್ಲಿ ಈ ಏಳು ಮಂದಿಗೆ ಮುಝಾಫರ್‌ನಗರ್ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಧೀಶ ರಾಜೇಶ್ ಭಾರದ್ವಾಜ್, ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ.

2010ರ ಫೆಬ್ರವರಿಯಲ್ಲಿ ಹರ್ಸೊಲಿ ಗ್ರಾಮದಲ್ಲಿ ಹಳೆ ವಿವಾದದ ಹಿನ್ನೆಲೆಯಲ್ಲಿ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಘರ್ಷಣೆಯಲ್ಲಿ ನಸೀಮ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು ಹಾಗೂ ಇತರ ಹಲವರು ಗಾಯಗೊಂಡಿದ್ದರು. ಘಟನೆಯ ಬಳಿಕ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಆರೋಪಿಗಳಾದ ಸಾದಿಕ್, ಶಹೀದ್, ಅರ್ಶದ್, ಸರ್ಫ್ರಾಜ್, ಫಾರೂಖ್ ಹಾಗೂ ಮುಮ್ತಾಝ್ ಅವರು ಮರಣದಂಡನೆಯನ್ನು ವಿಧಿಸಲಾಗಿದೆ. ಬಂಧನದ ಬಳಿಕ ಈ ಏಳು ಮಂದಿ ಆರೋಪಿಗಳನ್ನು ಜೈಲಿನಲ್ಲಿರಿಸಲಾಗಿತ್ತು.

ವಿಚಾರಣಾ ನ್ಯಾಯಾಲಯವು ನೀಡುವ ಗಲ್ಲು ಶಿಕ್ಷೆಯ ತೀರ್ಪನ್ನು ರಾಜ್ಯದ ಹೈಕೋರ್ಟ್ ದೃಢಪಡಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News