ಇಚಿಲಂಪಾಡಿ ಸೇತುವೆಯ ಅಡಿಭಾಗದಲ್ಲಿ ಅಕ್ರಮ ಮರಳುಗಾರಿಕೆ: ವಸಂತ ಕುಬುಲಾಡಿ

Update: 2018-11-20 16:53 GMT

ಕಡಬ, ನ.20. ಸುಬ್ರಹ್ಮಣ್ಯ - ಧರ್ಮಸ್ಥಳ ರಾಜ್ಯ ಹೆದ್ದಾರಿ ಹಾದು ಹೋಗಿರುವ ಇಚಿಲಂಪಾಡಿ ಸೇತುವೆಯ ಅಡಿಭಾಗದಲ್ಲಿ ಕಳೆದೆರಡು ತಿಂಗಳುಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ದಂಧೆಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದಲಿತ ಮುಖಂಡ ವಸಂತ ಕುಬುಲಾಡಿ ಆರೋಪ‌ ಮಾಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಚಿಲಂಪಾಡಿ ಸೇತುವೆಯ ಅನತಿ ದೂರದಲ್ಲೇ ಈ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಕತ್ತಲು ಆವರಿಸುತ್ತಿದಂತೆಯೇ ಅಕ್ರಮ ಮರಳುಗಾರಿಕೆ ನಡೆಯಲು ಅರಂಭವಾಗುತ್ತದೆ. ರಾತ್ರೆಯಾಗುತ್ತಿದ್ದಂತೆಯೇ ಸುಮಾರು ಹತ್ತಿಪ್ಪತ್ತು ಮಂದಿ ನದಿಗೆ ಇಳಿದು ಮರಳನ್ನು ರಾಶಿ ಮಾಡಿಡುತ್ತಾರೆ. ರಾತ್ರಿ ಹತ್ತು ಗಂಟೆಯ ವೇಳೆಗೆ ಸರತಿಯಲ್ಲಿ ಹಲವು ಮಿನಿ ಟಿಪ್ಪರ್ ಗಳು ಆಗಮಿಸುತ್ತವೆ. ಆದರೆ ನದಿಯಲ್ಲಿ ರಾಶಿ ಹಾಕಿದ ಮರಳನ್ನು ಕೊಂಡೊಯ್ಯಲು ಒಂದು ಟಿಪ್ಪರ್ ಮಾತ್ರ ನದಿಗೆ ಇಳಿಯುತ್ತದೆ. ಅದು ಲೋಡ್ ಆಗಿ ತೆರಳುತ್ತಿರುವಾಗ ಇನ್ನೊಂದು ಟಿಪ್ಪರ್ ಗೆ ಸರತಿಯಲ್ಲಿ ತಿಳಿಸಲಾಗುತ್ತದೆ. ಬೆಳಗ್ಗಿನ ಜಾವ ನಾಲ್ಕು ಗಂಟೆಯ ತನಕವೂ ಅಕ್ರಮ ಮರಳುಗಾರಿಕೆ ಸಾಗುತ್ತದೆ. ಒಂದೊಂದು ಲೋಡ್‌ ಮರಳು ಕುಡಾ ದುಬಾರಿ ಹಣಕ್ಕೆ ಬಿಕರಿಯಾಗುತ್ತದೆ ಎಂದು ಆರೋಪಿಸಿದರು.

ಬಡವರು ಮರಳು ಸಿಗದೆ ಮನೆ ಕಟ್ಟಲು ಪರದಾಡುತ್ತಿದ್ದು, ಧನಿಕರು ದುಬಾರಿ ಬೆಲೆಗೆ ಮರಳನ್ನು ಖರೀದಿಸಿ ಅಕ್ರಮ ದಂಗೆಕೋರರನ್ನು ಬೆಂಬಲಿಸುತ್ತಿದ್ದಾರೆ ಎಂದು ದೂರಿದ ಅವರು ಇಚಿಲಂಪಾಡಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ದಂಧೆಯನ್ನು ನಿಲ್ಲಿಸದೇ ಹೋದರೆ ಮುಂದಿನ ದಿನಗಳಲ್ಲಿ ನಾವು ಕೂಡಾ ನದಿಗಿಳಿದು ಮರಳು ತೆಗೆಯಲಿದ್ದೇವೆ ಎಂದು ಎಚ್ಚರಿಸಿದರು.

ಬೃಹತ್ ಗಾತ್ರದ ಅಕ್ರಮ ಮರಳುಗಾರಿಕೆ ಬಗ್ಗೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಂದ ಹಿಡಿದು ಕಡಬ ಪೊಲೀಸ್ ಠಾಣಾ ಅಧಿಕಾರಿಗಳಿಗೂ ಪದೇ ಪದೇ ದೂರು ನೀಡುತ್ತಾ ಬಂದಿದ್ದರೂ ಈ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಒಂದೊಂದು ಪಿಕಪ್ ಗೂ ತಲಾ ಇಂತಿಷ್ಟು ಸಾವಿರದಂತೆ ಸಂಬಂಧಪಟ್ಟ ಇಲಾಖೆಗಳ ಮೇಲಾಧಿಕಾರಿಗಳಿಂದ ಹಿಡಿದು ಕಿರಿಯ ಅಧಿಕಾರಿಗಳವರೆಗೆ ಹೋಗಿರುವುದರಿಂದ ದಾಳಿ ಮಾಡುವ ಮೊದಲೇ ಇದೇ ಅಧಿಕಾರಿಗಳು ಸ್ಥಳಕ್ಕೆ ಮೆಸೇಜ್ ನೀಡಿ ಕಾಟಾಚರಕ್ಕೆ ದಾಳಿ ಮಾಡ್ತಾರೆ. ಇದರಿಂದಾಗಿ ರೈಡ್ ಮಾಡಿದರೂ ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಅಕ್ರಮ ಮರಳುಗಾರರು ಕಾಲ್ಕಿತ್ತಿರುತ್ತಾರೆ. ರಾತ್ರಿ ವೇಳೆ ರೈಡ್ ಮಾಡುವಾಗಲೂ ಎಲ್ಲ ಪಿಕಪ್ ಗಳು ಬಲೆಗೆ ಬೀಳೋದಿಲ್ಲ. ಒಂದೆರಡು ಪಿಕಪ್ ಗಳನ್ನು ಹಿಡಿದು ಸಣ್ಣ ಮೊತ್ತದ ದಂಡ ವಿಧಿಸಿ ಬಿಡುತ್ತಾರೆಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಸೇತುವೆಯ ಅಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸದೆ ಹೋದರೆ ಬಂಟ್ವಾಳದ ಮುಲ್ಲರಪಟ್ಣ ಸೇತುವೆ ಕುಸಿದ ರೀತಿಯಲ್ಲಿ ಕೋಟ್ಯಂತರ ರೂ. ವೆಚ್ಚದ ಇಚಿಲಂಪಾಡಿ ಸೇತುವೆಯೂ ಕುಸಿಯುವ ಭೀತಿ ಎದುರಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News