ಪಾನ್ ಕಾರ್ಡ್ ಮಾಡಲು ಬಯಸಿರುವವರು ಈ ಹೊಸ ಬದಲಾವಣೆ ಬಗ್ಗೆ ತಿಳಿದುಕೊಳ್ಳಿ

Update: 2018-11-20 17:12 GMT

ಹೊಸದಿಲ್ಲಿ,ನ.20: ಪಾನ್ ಕಾರ್ಡ್‌ಗಾಗಿ ಹಾಕುವ ಅರ್ಜಿಯಲ್ಲಿ ತಂದೆಯ ಹೆಸರನ್ನು ತಿಳಿಸುವುದು ಕಡ್ಡಾಯವಲ್ಲ ಎಂದು ಮಂಗಳವಾರ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಪಾನ್ ಕಾರ್ಡ್ ಅರ್ಜಿಗಳಲ್ಲಿ, ತಾಯಿಯು ಸಿಂಗಲ್ ಪೇರೆಂಟ್ ಆಗಿದ್ದಾರೆಯೇ ಎಂದು ಅರ್ಜಿದಾರರಲ್ಲಿ ಕೇಳಲಾಗುವುದು. ಹೌದಾದಲ್ಲಿ ಅರ್ಜಿದಾರರು ಕೇವಲ ತನ್ನ ತಾಯಿಯ ಹೆಸರನ್ನು ತಿಳಿಸಿದರೆ ಸಾಕು ಎಂದು ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಲಾದ ಅಧಿಸೂಚನೆಯಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.

ಸದ್ಯ ಖಾಯಂ ಖಾತೆ ಸಂಖ್ಯೆ (ಪಾನ್) ಕಾರ್ಡ್ ನೀಡಲು ತಂದೆಯ ಹೆಸರನ್ನು ನೀಡುವುದು ಕಡ್ಡಾಯವಾಗಿದೆ. ತಿದ್ದುಪಡಿ ಮಾಡಲ್ಪಟ್ಟ ಹೊಸ ನಿಯಮವು ಡಿಸೆಂಬರ್ ಐದರಿಂದ ಜಾರಿಗೆ ಬರಲಿದೆ. ಕೇವಲ ತಾಯಿಯಿಂದ ಪೋಷಿಸಲ್ಪಟ್ಟವರು ತಮ್ಮ ಅರ್ಜಿಯಲ್ಲಿ ತಂದೆಯ ಬದಲು ತಾಯಿಯ ಹೆಸರನ್ನು ಬರೆಯಲು ಬಯಸುತ್ತಾರೆ. ಅಂಥವರಿಗೆ ಈ ಹೊಸ ನಿಯಮ ಖುಷಿ ತಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸ ನಿಯಮದಲ್ಲಿ, ವಾರ್ಷಿಕ 2.5 ಲಕ್ಷ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟು ಆರ್ಥಿಕ ವ್ಯವಹಾರ ನಡೆಸಿರುವ ಸಂಸ್ಥೆಗಳು ಪಾನ್ ಕಾರ್ಡ್‌ಪಡೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News