ಉಡುಪಿ: ನಗರ ಅನಿಲ ವಿತರಣೆ ಯೋಜನೆಗೆ ನ.22ರಂದು ಶಂಕು ಸ್ಥಾಪನೆ

Update: 2018-11-21 12:48 GMT

ಉಡುಪಿ, ನ.21: ಕೇಂದ್ರ ಪೆಟ್ರೋಲಿಯಂ ಮಂತ್ರಾಲಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿ (ಪಿಎನ್‌ಜಿಆರ್‌ಬಿ) ವತಿಯಿಂದ ದೇಶಾದ್ಯಂತ ಅನುಷ್ಠಾನಗೊಳ್ಳುವ ನಗರ ಅನಿಲ ವಿತರಣೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನ.22ರ ಗುರುವಾರ ಅಪರಾಹ್ನ 2:30ಕ್ಕೆ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಚಾಲನೆ ನೀಡಲಿದ್ದಾರೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ಹಾಗೂ ಕೇಂದ್ರ ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಉಪಸ್ಥಿತಿಯಲ್ಲಿ ಪ್ರಧಾನಿ ಯೋಜನೆಗೆ ಹಸಿರುನಿಶಾನೆ ತೋರುವರು. ಇದೇ ಸಂದರ್ಭದಲ್ಲಿ ಮಂಡಳಿ ವತಿಯಿಂದ ಈ ಯೋಜನೆ ಹಂಚಿಕೆಯಾದ ಜಿಲ್ಲೆಗಳಲ್ಲಿ ಆಯಾ ಸಂಸ್ಥೆಗಳಿಂದ ಶಂಕುಸ್ಥಾಪನೆ ನೆರವೇರಿಸಿ ಯೋಜನೆಗೆ ಚಾಲನೆ ನೀಡಲಾಗುತ್ತದೆ.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಗೆ ನಗರ ಅನಿಲ ವಿತರಣೆ ಮಾಡುವ ಗುತ್ತಿಗೆ ಅದಾನಿ ಸಮೂಹದ ಅಂಗಸಂಸ್ಥೆಯಾದ ಅದಾನಿ ಗ್ಯಾಸ್ ಲಿಮಿಟೆಡ್ ಸಂಸ್ಥೆಗೆ ಹಂಚಿಕೆಯಾಗಿದ್ದು, ನ.22ರ ಅಪರಾಹ್ನ 2:30ರಿಂದ ಸಂಜೆ 6:00ರವರೆಗೆ ಜಿಲ್ಲೆಯ ಬೀಡಿನಗುಡ್ಡೆಯ ಮಹಾತ್ಮಗಾಂಧಿ ಬಯಲು ರಂಗ ಮಂದಿರದಲ್ಲಿ ಅದಾನಿ ಸಂಸ್ಥೆ ಹಾಗೂ ಪೆಟ್ರೋಲಿಯಂ ಮಂತ್ರಾಲಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿ ಜಂಟಿಯಾಗಿ ಯೋಜೆಗೆ ಸಾಂಕೇತಿಕವಾಗಿ ಚಾಲನೆ ನೀಡಲಿದೆ.

ಹೊಸದಿಲ್ಲಿಯಲ್ಲಿ ವಿಜ್ಞಾನ್ ಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ಬೀಡಿನಗುಡ್ಡೆ ಬಯಲು ರಂಗಮಂದಿರದಲ್ಲಿ ನೇರ ಪ್ರಸಾರ ಮಾಡಲಾಗುತಿದ್ದು, ಪ್ರಧಾನ ಮಂತ್ರಿಯವರು ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಗರ ಅನಿಲ ವಿತರಣೆ ಯೋಜನೆಯಡಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿ ವತಿಯಿಂದ ಉಡುಪಿ ಜಿಲ್ಲೆಗೆ ಪೈಪಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಮತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಅನುಷ್ಠಾನಗೊಳಿಸಲು ಅದಾನಿ ಗ್ಯಾಸ್ ಲಿಮಿಟೆಡ್ ಸಂಸ್ಥೆಗೆ ಹಂಚಿಕೆ ಯಾಗಿದ್ದು, ಈ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಸುಮಾರು 1.10 ಲಕ್ಷ ಪಿಎನ್‌ಜಿ ಸಂಪರ್ಕಗಳು, 11 ಸಿಎನ್‌ಜಿ ಘಟಕಗಳು ಮತ್ತು 569 ಕಿ.ಮೀ ಉದ್ದದ ಪೈಪ್‌ಲೈನ್ ನೆಟ್‌ವರ್ಕ್ ಒಳಗೊಂಡಿದೆ.

ನ. 22ರಂದು ಉಡುಪಿಯಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವೆ ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲಾಣ ಸಚಿವೆ ಡಾ. ಜಯಮಾಲ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಉಡುಪಿ ಶಾಸಕ ಕೆ. ರಘುಪತಿ ಭಟ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಲಾಲಾಜಿ ಮೆಂಡನ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಸ್ಥಳೀಯ ಗಣ್ಯರು ಉಪಸ್ಥಿತರಿರುವರು ಎಂದು ಅದಾನಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News