ಅಂಡಮಾನ್‌ನಲ್ಲಿ ಬುಡಕಟ್ಟು ಜನರಿಂದ ಅಮೆರಿಕನ್ ಪ್ರವಾಸಿಯ ಹತ್ಯೆ

Update: 2018-11-21 14:09 GMT

 ಪೋರ್ಟ್‌ಬ್ಲೇರ್,ನ.21: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ಉತ್ತರ ಸೆಂಟಿನೆಲ್ ನಡುಗಡ್ಡೆಗೆ ಭೇಟಿ ನೀಡಿದ್ದ ಅಮೆರಿಕನ್ ಪ್ರವಾಸಿಯೋರ್ವನನ್ನು ಅಲ್ಲಿಯ ಬುಡಕಟ್ಟು ಜನರು ಹತ್ಯೆ ಮಾಡಿದ್ದಾರೆ.

ಸೆಂಟಿನಲಿ ಬುಡಕಟ್ಟು ಜನರು ವಾಸವಾಗಿರುವ ಈ ದ್ವೀಪಕ್ಕೆ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. ಹತ ವ್ಯಕ್ತಿಯನ್ನು ಜಾನ್ ಅಲೆನ್ ಚಾವು (27)ಎಂದು ಗುರುತಿಸಲಾಗಿದೆ.

ಮೀನುಗಾರಿಕೆ ದೋಣಿಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ ಚಾವು ಮೀನುಗಾರರ ನೆರವಿನಿಂದ ನ.16ರಂದು ಉತ್ತರ ಸೆಂಟಿನೆಲ್ ದ್ವೀಪದ ಬಳಿ ತಲುಪಿದ್ದು,ನಂತರ ಪುಟ್ಟದೋಣಿಯೊಂದರಲ್ಲಿ ದ್ವೀಪವನ್ನು ಸೇರಿದ್ದ. ಮರುದಿನ ಆತನನ್ನು ವಾಪಸ್ ಕರೆದೊಯ್ಯಲು ಬಂದಿದ್ದ ಮೀನುಗಾರರಿಗೆ ಆತನ ಶವ ಕಂಡಿತ್ತು. ಅದನ್ನು ಇನ್ನಷ್ಟೇ ಪೊಲೀಸರು ವಶಪಡಿಸಿಕೊಳ್ಳಬೇಕಿದ್ದು, ಮೀನುಗಾರರನ್ನು ಬಂಧಿಸಲಾಗಿದೆ.

ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು,ತನಿಖೆಯು ಆರಂಭವಾಗಿದೆ ಎಂದು ಪೊಲೀಸ್ ಅಧಿಕಾರಿ ದೀಪಕ ಯಾದವ ತಿಳಿಸಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳಲ್ಲಿ ಅಮೆರಿಕನ್ ಪ್ರಜೆಯೋರ್ವ ನಾಪತ್ತೆಯಾಗಿದ್ದು,ಆತನ ಪತ್ತೆಗಾಗಿ ಸ್ಥಳೀಯ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಚೆನ್ನೈನಲ್ಲಿರುವ ಅಮೆರಿಕನ್ ಕಾನ್ಸುಲೇಟ್‌ನ ವಕ್ತಾರರು ತಿಳಿಸಿದರು.

ಈ ಹಿಂದೆಯೂ ಹಲವಾರು ಬಾರಿ ಇಲ್ಲಿಗೆ ಭೇಟಿ ನೀಡಿದ್ದ ಚಾವು ಸೆಂಟಿನೆಲಿಗಳನ್ನು ಭೇಟಿಯಾಗುವ ಬಯಕೆಯನ್ನು ಹೊಂದಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News