ಶಬರಿಮಲೆ : ಭದ್ರತಾ ಸಿಬ್ಬಂದಿಯೊಂದಿಗೆ ಕೇಂದ್ರ ಸಚಿವರ ವಾಗ್ವಾದ

Update: 2018-11-21 15:18 GMT

ತಿರುವನಂತಪುರಂ, ನ.21: ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್‌ರನ್ನು ಪೊಲೀಸರು ತಡೆದ ಕಾರಣ ಸಚಿವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಕಾರಣಕ್ಕಾಗಿ ಪಂಬ(ಪಂಪ)ದವರೆಗೆ ಮಾತ್ರ ಖಾಸಗಿ ವಾಹನಗಳಿಗೆ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿದ್ದು ಅಲ್ಲಿಂದ ಮುಂದಕ್ಕೆ ಖಾಸಗಿ ವಾಹನ ಸಾಗಲು ಪೊಲೀಸರು ನಿಷೇಧಿಸಿದ್ದಾರೆ. ಸರಕಾರಿ ವಾಹನದಲ್ಲಿ ಆಗಮಿಸುವಂತೆ ಪೊಲೀಸರು ವಿನಂತಿಸಿದರೂ ಸಚಿವರಿಗೆ ನಿರಾಕರಿಸಿದರು ಎನ್ನಲಾಗಿದೆ. ರಾಜ್ಯ ಸರಕಾರದ ಅಧೀನದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಪಂಬದಿಂದ ಮುಂದೆ ಸಾಗಲು ಬಿಡುತ್ತಿರುವ ಬಗ್ಗೆ ಆಕ್ಷೇಪಿಸಿದ ಸಚಿವರು ವಾಗ್ವಾದ ನಡೆಸಿದರು ಎಂದು ಅಧಿಕಾರಿ ಯತೀಶ್‌ಚಂದ್ರ ತಿಳಿಸಿದ್ದಾರೆ.

 ಶಿಪ್ಪಿಂಗ್ ಹಾಗೂ ವಿತ್ತ ಇಲಾಖೆಯ ಸಹಾಯಕ ಸಚಿವರಾಗಿರುವ ರಾಧಾಕೃಷ್ಣನ್ ಬುಧವಾರ ಶಬರಿಮಲೆ ದೇವಸ್ಥಾನಕ್ಕಿಂತ 20 ಕಿ.ಮೀ. ದೂರದ ಮೂಲ ಶಿಬಿರಕ್ಕೆ ಆಗಮಿಸಿದರು. ಅಲ್ಲಿಂದ ಮುಂದಕ್ಕೆ ರಾಜ್ಯ ಸರಕಾರ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಿರುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಸರಕಾರಿ ವಾಹನವನ್ನು ತ್ಯಜಿಸಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮುಂದುವರಿಯಲು ನಿರ್ಧರಿಸಿದರು. ಈ ಸಂದರ್ಭ ಭದ್ರತಾ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ ಅವರು, ನೀವು ಅನಗತ್ಯವಾಗಿ ಯಾತ್ರಿಗಳಿಗೆ ಕಿರುಕುಳ ನೀಡುತ್ತಿದ್ದೀರಿ. ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಮಾತ್ರ ಮುಂದೆ ಬಿಡುತ್ತಿರುವುದು ಶಬರಿಮಲೆಗೆ ಬರುವ ಯಾತ್ರಿಗಳಿಗೆ ಸಮಸ್ಯೆಯಾಗಿದೆ. ಆದ್ದರಿಂದ ಖಾಸಗಿ ವಾಹನಗಳನ್ನೂ ಬಿಡಬೇಕು ಎಂದು ಹೇಳಿದರು.

 ಆದರೆ ಆಗಸ್ಟ್‌ನಲ್ಲಿ ಉಂಟಾದ ನೆರೆ ಹಾವಳಿಯಿಂದ ಪಂಬದಲ್ಲಿರುವ ವಾಹನ ಪಾರ್ಕಿಂಗ್ ಪ್ರದೇಶ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕೆಎಸ್‌ಆರ್‌ಟಿಸಿ ಬಸ್ಸುಗಳನ್ನೂ ಪಂಬದಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ. ಅಲ್ಲಿಂದ ವಾಪಾಸು ಬರುವ ಯಾತ್ರಿಗಳನ್ನು ಹತ್ತಿಸಿಕೊಂಡು ಹಿಂದಿರುಗುತ್ತದೆ. ಅಲ್ಲದೆ ಖಾಸಗಿ ವಾಹನಗಳಿಂದ ಟ್ರಾಫಿಕ್ ಜಾಂ ಆಗುವ ಸಾಧ್ಯತೆಯಿದೆ ಎಂದು ಯತೀಶ್‌ಚಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News