ಕರ್ನಾಟಕದಲ್ಲಿ ರಸಾತಳಕ್ಕೆ ಇಳಿದ ಈರುಳ್ಳಿ ಬೆಲೆ: ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 1 ರೂ!

Update: 2018-11-21 15:54 GMT

ಹೊಸದಿಲ್ಲಿ,ನ.21: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ರಸಾತಳಕ್ಕಿಳಿದಿದ್ದು,ಸಗಟು ಮಾರುಕಟ್ಟೆಗಳಲ್ಲಿ ಬೆಳೆಗಾರರಿಗೆ ಪ್ರತಿ ಕೆ.ಜಿ.ಗೆ ಒಂದು ರೂ.ಬೆಲೆ ದೊರೆಯುತ್ತಿದೆ!

ಕಳೆದೊಂದು ವಾರದಿಂದ ಈರುಳ್ಳಿ ಬೆಲೆ ಕುಸಿಯುತ್ತಲೇ ಇದ್ದು,ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ.

 ಈರುಳ್ಳಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಹುಬ್ಬಳ್ಳಿ, ಧಾರವಾಡ, ಹಾವೇರಿ, ಬಾಗಲಕೋಟೆ,ಬೆಳಗಾವಿ,ದಾವಣಗೆರೆ, ಚಿತ್ರದುರ್ಗ ಮತ್ತು ಇತರೆಡೆಗಳಲ್ಲಿಯ ಸಗಟು ಮಾರುಕಟ್ಟೆಗಳಲ್ಲಿ ಪ್ರತಿ 100 ಕೆ.ಜಿ.ಯ ಚೀಲ 100 ರೂ.ಗೆ ಮಾರಾಟವಾಗುತ್ತಿದೆ. ವಾರದ ಹಿಂದೆ ಪ್ರತಿ ಕ್ವಿಂಟಲ್‌ಗೆ 500 ರೂ.ಇದ್ದ ಬೆಲೆ ಒಂದು ದಿನದ ಬಳಿಕ 200 ರೂ.ಕುಸಿದಿತ್ತು.

ರಾಜ್ಯದ ಮಾರುಕಟ್ಟೆಗೆ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಂದ ಭಾರೀ ಪ್ರಮಾಣದಲ್ಲಿ ಈರುಳ್ಳಿ ಬಂದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಮಾರುಕಟ್ಟೆಗೆ ಈರುಳ್ಳಿಯನ್ನು ತಂದಿರುವ ರೈತರಿಗೆ ಕೃಷಿವೆಚ್ಚ ಹೋಗಲಿ,ಸಾಗಣೆ ವೆಚ್ಚವೂ ದೊರೆಯುತ್ತಿಲ್ಲ ಎಂದು ಧಾರವಾಡದ ರೈತರೋರ್ವರು ಹೇಳಿದರು.

 ಕರ್ನಾಟಕವು ತನ್ನ ಹೆಚ್ಚಿನ ಈರುಳ್ಳಿಯನ್ನು ನೆರೆಯ ತಮಿಳುನಾಡು,ಕೇರಳ ಮತ್ತು ಉತ್ತರದ ರಾಜ್ಯಗಳಿಗೆ ರಫ್ತು ಮಾಡುತ್ತದೆ. ಆದರೆ ಗಜ ಚಂಡಮಾರುತದಿಂದಾಗಿ ಕಳೆದೊಂದು ವಾರದಿಂದ ತಮಿಳುನಾಡಿಗೆ ಈರುಳ್ಳಿ ರವಾನೆಯಾಗುತ್ತಿಲ್ಲ. ಇದು ಕೂಡ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಅಸಹಾಯಕ ಬೆಳೆಗಾರರ ರಕ್ಷಣೆಗೆ ತಕ್ಷಣ ಧಾವಿಸುವಂತೆ ರೈತ ಸಂಘಗಳು ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಆಗ್ರಹಿಸಿವೆ.

ಈರುಳ್ಳಿ ಬೆಲೆ ಏರಿದಾಗೆಲ್ಲ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗುತ್ತದೆ. ಎಲ್ಲೋ ಐದು ವರ್ಷಕ್ಕೊಮ್ಮೆ ಅಪರೂಪಕ್ಕೆ ಬೆಲೆ ಏರಿಕೆಯಾಗಬಹುದು. ಆದರೆ ಪ್ರತಿ ವರ್ಷವೂ ಈರುಳ್ಳಿ ಬೆಲೆ ಕುಸಿಯುತ್ತಿದ್ದು ಹಲವಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಮಾಧ್ಯಮಗಳಿಗೆ ಸುದ್ದಿಯಾಗುವುದಿಲ್ಲ ಮತ್ತು ಸರಕಾರವೂ ಏನೂ ಮಾಡುವುದಿಲ್ಲ ಎಂದು ಹಿರಿಯ ರೈತ ನಾಯಕ ಸಿ.ನರಸಿಂಹಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News