ಸೌದಿ ಅರೇಬಿಯದ ವಿರುದ್ಧ ಇನ್ನು ದಂಡನಾ ಕ್ರಮವಿಲ್ಲ: ಟ್ರಂಪ್ ಘೋಷಣೆ

Update: 2018-11-21 16:53 GMT

ವಾಶಿಂಗ್ಟನ್, ನ. 21: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಬಗ್ಗೆ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ಗೆ ಗೊತ್ತಿದ್ದಿರಬಹುದು ಅಥವಾ ಗೊತ್ತಿಲ್ಲದಿದ್ದಿರಬಹುದು, ಆದರೆ, ಇನ್ನು ಮುಂದೆ ಆ ಬಗ್ಗೆ ಹೆಚ್ಚಿನ ದಂಡನಾ ಕ್ರಮವಿಲ್ಲ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

 ‘ಸೌದಿ ಅರೇಬಿಯದ ಜೊತೆಗೆ ನಿಲ್ಲುವ ಬಗ್ಗೆ’ ಎಂಬ ತಲೆಬರಹದ ಹೇಳಿಕೆಯೊಂದನ್ನು ನೀಡಿರುವ ಅಧ್ಯಕ್ಷರು, ತೈಲ ಸಮೃದ್ಧ ಕೊಲ್ಲಿ ದೇಶದೊಂದಿಗಿನ ನಿಕಟ ಆಯಕಟ್ಟಿನ ಹಾಗೂ ವ್ಯಾಪಾರಿ ಸಂಬಂಧವನ್ನು ಪ್ರಸ್ತಾಪಿಸಿದ್ದಾರೆ.

ಖಶೋಗಿ ಹತ್ಯೆಗಾಗಿ ಅಮೆರಿಕ ಈಗಾಗಲೇ 17 ಸೌದಿ ರಾಷ್ಟ್ರೀಯರ ವಿರುದ್ಧ ದಿಗ್ಬಂಧನಗಳನ್ನು ವಿಧಿಸಿದೆ ಎಂದು ಹೇಳಿದರು.

ಸೌದಿ ಅರೇಬಿಯ ವಿರುದ್ಧ ಹೆಚ್ಚಿನ ದಂಡನಾ ಕ್ರಮಗಳಿಲ್ಲ ಎಂಬ ಇಂಗಿತವನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ನೆಲೆಸಿದ್ದ ಸೌದಿ ಪತ್ರಕರ್ತನ ಕೊಲೆಗೆ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದಾರೆ ಎಂಬ ತೀರ್ಮಾನಕ್ಕೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಬಂದಿರುವುದನ್ನು ಸ್ಮರಿಸಬಹುದಾಗಿದೆ.

ಸಿಐಎ ತನಿಖೆ ಬಗ್ಗೆ ಟ್ರಂಪ್ ಅನುಮಾನ

‘‘ನಮ್ಮ ಗುಪ್ತಚರ ಸಂಸ್ಥೆಗಳು ಮಾಹಿತಿಗಳನ್ನು ಕಲೆಹಾಕುತ್ತಿವೆ ಹಾಗೂ ವಿಶ್ಲೇಷಣೆ ನಡೆಸುತ್ತಿವೆ. ಸೌದಿ ಯುವರಾಜನಿಗೆ ಹತ್ಯೆಯ ಬಗ್ಗೆ ಪೂರ್ವ ಮಾಹಿತಿಯಿತ್ತು ಎನ್ನುವುದು ತನಿಖೆಯಿಂದ ಹೊರಬರಲೂಬಹುದು. ಆದರೆ, ಅದು ಸ್ಪಷ್ಟವಿಲ್ಲ. ಅವರಿಗೆ ಗೊತ್ತಿದ್ದಿರಬಹುದು, ಗೊತ್ತಿಲ್ಲದಿರಲೂಬಹುದು’’ ಎಂದು ಟ್ರಂಪ್ ಹೇಳಿದರು.

‘‘ಅಂದ ಮಾತ್ರಕ್ಕೆ, ಕೊಲೆಯ ಸುತ್ತಲಿನ ಸಂಗತಿಗಳು ನಮಗೆ ಯಾವತ್ತೂ ಗೊತ್ತಾಗದೆ ಉಳಿಯಲೂ ಬಹುದು’’ ಎಂದರು.

ಇದು 400 ಬಿಲಿಯ ಡಾಲರ್ ಪ್ರಶ್ನೆ!

ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಹೊಣೆಯಿಂದ ಸೌದಿ ಅರೇಬಿಯ ತಪ್ಪಿಸಿಕೊಳ್ಳುತ್ತಿದೆ ಎಂದು ಅನಿಸುವುದಿಲ್ಲವೇ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘‘ಇಲ್ಲ, ಇಲ್ಲ.. ಇದು ‘ಅಮೆರಿಕ ಮೊದಲು’ ನೀತಿಯಾಗಿದೆ. ಅವರು ನಮಗೆ 400 ಬಿಲಿಯ ಡಾಲರ್ (28.50 ಲಕ್ಷ ಕೋಟಿ ರೂಪಾಯಿ)ಗೂ ಅಧಿಕ ಮೊತ್ತ ನೀಡುತ್ತಿದ್ದಾರೆ (ಹೂಡಿಕೆ ಮತ್ತು ವ್ಯಾಪಾರಗಳ ಮೂಲಕ)’’ ಎಂದರು.

ಹೊಸ ತನಿಖೆಗೆ ಅಮೆರಿಕ ಸೆನೆಟ್ ಆಗ್ರಹ

ಸೌದಿ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದರೇ ಎಂಬುದನ್ನು ನಾಲ್ಕು ತಿಂಗಳಲ್ಲಿ ತೀರ್ಮಾನಿಸಲು ಹೊಸ ತನಿಖೆ ನಡೆಸುವಂತೆ ಸೆನೆಟ್ ಸಮಿತಿಯೊಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿದೆ.

ಹತ್ಯೆಗೆ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದರು ಎಂಬ ಸಿಐಎ ತೀರ್ಮಾನ ‘ನಿಖರವಲ್ಲ’ ಎಂಬ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ ಬಳಿಕ, ಅಮೆರಿಕ ಸೆನೆಟ್ ವಿದೇಶ ಸಂಬಂಧಗಳ ಸಮಿತಿಯ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಸದಸ್ಯರು ಮಂಗಳವಾರ ಟ್ರಂಪ್‌ಗೆ ಪತ್ರವೊಂದನ್ನು ಬರೆದು ಈ ಒತ್ತಾಯವನ್ನು ಮಾಡಿದ್ದಾರೆ.

ಹತ್ಯೆಗೆ ಯಾರು ಆದೇಶ ನೀಡಿದ್ದರೂ ಶಿಕ್ಷೆಯಾಗಬೇಕು: ಟರ್ಕಿ

ಜಮಾಲ್ ಖಶೋಗಿ ಹತ್ಯೆಗೆ ಯಾರು ಆದೇಶ ನೀಡಿದ್ದರೂ ಅವರನ್ನು ಉತ್ತರದಾಯಿಯನ್ನಾಗಿಸಬೇಕು ಎಂದು ಟರ್ಕಿ ವಿದೇಶ ಸಚಿವರು ಮಂಗಳವಾರ ಕರೆ ನೀಡಿದ್ದಾರೆ.

‘‘ಹತ್ಯೆಗೆ ಯಾರು ಸೂಚನೆ ನೀಡಿದ್ದರೂ ಅವರನ್ನು ಉತ್ತರದಾಯಿಯನ್ನಾಗಿಸಬೇಕು. ಈ ಅಪರಾಧವನ್ನು ಯಾರೇ ಮಾಡಿದ್ದರೂ ಅವರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಬೇಕು’’ ಎಂದು ಟರ್ಕಿ ವಿದೇಶ ಸಚಿವ ಮೆವ್ಲತ್ ಕವುಸೊಗ್ಲು ಅಮೆರಿಕ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊರನ್ನು ವಾಶಿಂಗ್ಟನ್‌ನಲ್ಲಿ ಭೇಟಿಯಾದ ಬಳಿಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News