ಇಂಟರ್‌ಪೋಲ್ ನೂತನ ಅಧ್ಯಕ್ಷರಾಗಿ ದ. ಕೊರಿಯದ ಕಿಮ್ ಆಯ್ಕೆ

Update: 2018-11-21 17:09 GMT

ದುಬೈ, ನ. 21: ದಕ್ಷಿಣ ಕೊರಿಯದ ಕಿಮ್ ಜಾಂಗ್-ಯಾಂಗ್‌ರನ್ನು ಇಂಟರ್‌ಪೋಲ್‌ನ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಇಂಟರ್‌ಪೋಲ್ ಬುಧವಾರ ಪ್ರಕಟಿಸಿದೆ.

ಚೀನಾದಲ್ಲಿ ಸೆಪ್ಟಂಬರ್‌ನಲ್ಲಿ ನಾಪತ್ತೆಯಾಗಿರುವ ಮೆಂಗ್ ಹೊಂಗ್‌ವೀ ಸ್ಥಾನಕ್ಕೆ ಜಾಗತಿಕ ಪೊಲೀಸ್ ಸಂಘಟನೆ ಇಂಟರ್‌ಪೋಲ್‌ನ ಉಸ್ತುವಾರಿ ಅಧ್ಯಕ್ಷರಾಗಿದ್ದ ಕಿಮ್‌ರನ್ನು ಆರಿಸಲಾಗಿದೆ.

ಇಂಟರ್‌ಪೋಲ್‌ನ ಸದಸ್ಯ ದೇಶಗಳ ಪ್ರತಿನಿಧಿಗಳು ದುಬೈಯಲ್ಲಿ ನಡೆದ ಸಭೆಯಲ್ಲಿ ಅಮೆರಿಕ ಬೆಂಬಲಿತ ಕಿಮ್‌ರನ್ನು ಆಯ್ಕೆ ಮಾಡಿದವು.

ಕಿಮ್ ತನ್ನ ಪ್ರತಿಸ್ಪರ್ಧಿಯಾಗಿದ್ದ ರಶ್ಯದ ಅಲೆಕ್ಸಾಂಡರ್ ಪ್ರೊಕೊಪ್ಚುಕ್‌ರನ್ನು ಸೋಲಿಸಿದರು.

ಅಲೆಕ್ಸಾಂಡರ್ ರಶ್ಯದ ಆಂತರಿಕ ಸಚಿವಾಲಯದ ಅಧಿಕಾರಿಯಾಗಿದ್ದಾರೆ ಹಾಗೂ ಪ್ರಸಕ್ತ ಇಂಟರ್‌ಪೋಲ್ ಉಪಾಧ್ಯಕ್ಷರಾಗಿದ್ದಾರೆ.

ರಶ್ಯ ಅಭ್ಯರ್ಥಿಯ ಬಗ್ಗೆ ಐರೋಪ್ಯ ದೇಶಗಳು ಕಳವಳ ವ್ಯಕ್ತಪಡಿಸಿದ್ದವು ಹಾಗೂ ಅವರ ಅಭ್ಯರ್ಥಿತ್ವವನ್ನು ರದ್ದುಪಡಿಸಬೇಕೆಂದು ಅವು ಇಂಟರ್‌ಪೋಲನ್ನು ಒತ್ತಾಯಿಸಿದ್ದವು.

ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಈ ಹುದ್ದೆಯನ್ನು ರಶ್ಯ ದುರುಪಯೋಗಪಡಿಸಿಕೊಳ್ಳಬಹುದು ಎಂಬ ಕಳವಳವನ್ನು ಐರೋಪ್ಯ ದೇಶಗಳು ವ್ಯಕ್ತಪಡಿಸಿದ್ದವು.

ಅಮೆರಿಕ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮಂಗಳವಾರ ದಕ್ಷಿಣ ಕೊರಿಯದ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು.

ಕಿಮ್ 2020ರವರೆಗೆ, ಅಂದರೆ ಚೀನಾದಲ್ಲಿ ನಾಪತ್ತೆಯಾಗಿರುವ ಮೆಂಗ್‌ರ ಉಳಿಕೆ ಅವಧಿಯಲ್ಲಿ ಸೇವೆ ಸಲ್ಲಿಸುತ್ತಾರೆ.

ಮೆಂಗ್ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಲಾಗಿದ್ದು, ಅವರು ಇಂಟರ್‌ಪೋಲ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ಚೀನಾ ಬಳಿಕ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News