ಒಮರ್ ಅಬ್ದುಲ್ಲಾ ಸವಾಲಿಗೆ ಉತ್ತರಿಸಲಾಗದೆ `ಪಾಕ್ ಕೈವಾಡ' ಹೇಳಿಕೆ ವಾಪಸ್ ಪಡೆದ ಬಿಜೆಪಿ ನಾಯಕ ರಾಮ್ ಮಾಧವ್

Update: 2018-11-22 13:49 GMT

ಹೊಸದಿಲ್ಲಿ, ನ.22: ಜಮ್ಮು ಕಾಶ್ಮೀರದಲ್ಲಿ ಪಿಡಿಪಿಯ ಮೆಹಬೂಬಾ ಮುಫ್ತಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಜತೆಯಾಗಿ ಸರಕಾರ ರಚಿಸಲು ಪ್ರಯತ್ನ ನಡೆಸಿದ್ದರ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದ್ದ ಬಿಜೆಪಿ ನಾಯಕ ರಾಮ್ ಮಾಧವ್ ಇದೀಗ ತಮ್ಮ ಆರೋಪವನ್ನು ವಾಪಸ್ ಪಡೆದಿದ್ದಾರೆ.

ರಾಮ್ ಮಾಧವ್ ಮತ್ತು ಕೇಂದ್ರ ಸರಕಾರ `ಪಾಕ್ ಕೈವಾಡ' ಆರೋಪವನ್ನು ಸಾಬೀತುಪಡಿಸಬೇಕು ಎಂದು ಒಮರ್ ಅಬ್ದುಲ್ಲಾ ಆಕ್ರೋಶದಿಂದ ಸವಾಲು ಹಾಕಿದ ನಂತರ ಈ ಬೆಳವಣಿಗೆ ನಡೆದಿದೆ.

ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿದ ರಾಜ್ಯಪಾಲರ ಕ್ರಮವನ್ನು ಸಮರ್ಥಿಸುವ ಭರದಲ್ಲಿ ರಾಮ್ ಮಾಧವ್ `ಗಡಿಯಾಚೆಗಿನ ನಿರ್ದೇಶನದಂತೆ' ಎರಡು ಮೈತ್ರಿಕೂಟಗಳು ಸರಕಾರ ರಚಿಸಲು ತಮ್ಮ ಹಕ್ಕು ಮಂಡಿಸಿದ್ದವು ಎಂದು ಆರೋಪಿಸಿದ್ದರು.

“ಪಿಡಿಪಿ ಮತ್ತು ಎನ್‍ಸಿ ಕಳೆದ ತಿಂಗಳ ಸ್ಥಳೀಯಾಡಳಿತ ಚುನಾವಣೆಯನ್ನು ಗಡಿಯಾಚೆಗಿನ ಸೂಚನೆಯಂತೆ ಬಹಿಷ್ಕರಿಸಿದ್ದವು. ಪ್ರಾಯಶಃ ಇದೀಗ ಜತೆಯಾಗಿ ಸರಕಾರ ರಚಿಸುವಂತೆ ಅವರಿಗೆ ಗಡಿಯಾಚೆಗಿನಿಂದ ಹೊಸ ಆದೇಶ ಬಂದಿರಬಹುದು. ಅವರು ಮಾಡಿದ್ದು ರಾಜ್ಯಪಾಲರಿಗೆ ಕೂಲಂಕಷವಾಗಿ ಪರಿಶೀಲಿಸುವಂತೆ ಮಾಡಿತು'' ಎಂದು ರಾಮ್ ಮಾಧವ್ ಸುದ್ದಿಗಾರರ ಜತೆ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಒಮರ್ ಅಬ್ದುಲ್ಲಾ, ಸರಕಾರ ಮತ್ತು ರಾಮ್ ಮಾಧವ್‍ಗೆ ಬಹಿರಂಗ ಸವಾಲೊಡ್ಡಿ ಆರೋಪ ಸಾಬೀತು ಪಡಿಸಿ ಎಂದಿದ್ದರು. “ರಾಮ್ ಮಾಧವ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು, ಅವರ ಹೇಳಿಕೆ ಪಕ್ಷದ ಸಾವಿರಾರು ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ರಾಜ್ಯಕ್ಕಾಗಿ ನಿಮ್ಮ ಪಕ್ಷ ಮಾಡಿದ್ದಕ್ಕಿಂತ ಹೆಚ್ಚಿನ ತ್ಯಾಗಗಳನ್ನು ನಮ್ಮ ಕಾರ್ಯಕರ್ತರು ಮಾಡಿದ್ದಾರೆ,'' ಎಂದಿದ್ದರು. ಇದಾದ ಕಲವೇ ಗಂಟೆಗಳಲ್ಲಿ ತಾವು ಹೇಳಿಕೆ ವಾಪಸ್ ಪಡೆಯುವುದಾಗಿ ತಿಳಿಸಿದ ರಾಮ್ ಮಾಧವ್ ಅದೇ ಸಮಯ “ನಿಜವಾದ ಪ್ರೀತಿಯಿಂದ ಸರಕಾರ ರಚಿಸಲು ಮುಂದಾಗಿದ್ದೇ ಆದಲ್ಲಿ ನಿಮ್ಮ ಎರಡೂ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಜತೆಯಾಗಿ ಎದುರಿಸಬೇಕು'' ಎಂದು ಮರು ಸವಾಲೆಸೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News