ತಿಹಾರ್ ಜೈಲಿನಲ್ಲಿ ‘ಯುನಿಟೆಕ್’ ಎಂಡಿಯ ಐಷಾರಾಮಿ ಜೀವನ

Update: 2018-11-22 14:26 GMT

ಹೊಸದಿಲ್ಲಿ, ನ.22: ತಿಹಾರ್ ಜೈಲಿನಲ್ಲಿ ಯುನಿಟೆಕ್ ಸಂಸ್ಥೆಯ ಎಂಡಿ ಸಂಜಯ್‌ ಚಂದ್ರ ಹಾಗೂ ಆತನ ಸಹೋದರ ಅಜಯ್‌ರನ್ನು ಬಂಧನದಲ್ಲಿಟ್ಟಿರುವ ಕೋಣೆಯಲ್ಲಿ ಎಲ್‌ಇಡಿ ಟಿವಿ, ಮಿನರಲ್ ವಾಟರ್ ವ್ಯವಸ್ಥೆ, ಬ್ಯಾಡ್ಮಿಂಟನ್ ರ‍್ಯಾಕೆಟ್ ಗಳು ಕಂಡುಬಂದಿರುವ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದೆ.

ಜೈಲಿನಲ್ಲಿ ಸಮಾನಾಂತರ ವ್ಯವಸ್ಥೆ ಜಾರಿಯಲ್ಲಿದೆಯೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ತಿಹಾರ್ ಜೈಲಿನಲ್ಲಿ ‘ಗಣ್ಯ’ ಅಪರಾಧಿಗಳು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಮೂಲ ಅಗತ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹಲವು ಕೈದಿಗಳು ಆರೋಪಿಸಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಸೆಪ್ಟೆಂಬರ್ 4ರಂದು ತಿಹಾರ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಮೇಶ್ ಕುಮಾರ್ ದಿಲ್ಲಿ ಹೈಕೋರ್ಟ್‌ಗೆ ನೀಡಿದ ವರದಿಯಲ್ಲಿ, ತಿಹಾರ್ ಜೈಲಿನಲ್ಲಿ ಬಂಧೀಖಾನೆ ಡಿಜಿ ಹಾಗೂ ಇತರ ಅಧಿಕಾರಿಗಳು ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗ ನಡೆಸಿರುವ ಬಗ್ಗೆ ಆಧಾರಗಳಿವೆ ಎಂದು ತಿಳಿಸಿದ್ದರು.

 ಅಲ್ಲದೆ ಬಂಧೀಖಾನೆ ಡಿಜಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ತಿಳಿಸಿದ್ದರು. ಯುನಿಟೆಕ್ ಎಂಡಿಯನ್ನು ಇರಿಸಲಾಗಿರುವ ಕೋಣೆಯಲ್ಲಿ ಕಂಡುಬಂದಿದ್ದ ಅಕ್ವಾಫಿನಾ ಮಿನರಲ್ ವಾಟರ್ ಬಾಟಲಿಯನ್ನು ತಾವು ಜೈಲಿನ ಕ್ಯಾಂಟೀನ್‌ನಿಂದ ಖರೀದಿಸಿರುವುದಾಗಿ ತಿಳಿಸಲಾಗಿದೆ. ಆದರೆ ಜೈಲಿನ ಕ್ಯಾಂಟೀನಿನಲ್ಲಿ ಬಿಸ್ಲೇರಿ ಬ್ರಾಂಡ್‌ನ ಮಿನರಲ್ ವಾಟರ್ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ಅಲ್ಲದೆ ಈ ಕೋಣೆಗೆ ಅಳವಡಿಸಲಾಗಿರುವ ಕಬ್ಬಿಣದ ಬಲೆಗೆ ಕಂಬಳಿ ಹಾಗೂ ರಟ್ಟುಗಳನ್ನು ಹೊದಿಸುವ ಮೂಲಕ ಹೊರಗಿನ ಗಾಳಿ ಕೋಣೆಯ ಒಳಗೆ ಪ್ರವೇಶಿಸದಂತೆ ವ್ಯವಸ್ಥೆ ಮಾಡಲಾಗಿದೆ. ಬಂಧೀಖಾನೆ ಡಿಜಿ ಹಾಗೂ ಇತರ ಅಧಿಕಾರಿಗಳು ಶಾಮೀಲಾಗಿರದೆ ಅಥವಾ ಅವರಿಗೆ ತಿಳಿಯದಂತೆ ಇಂತಹ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಜೈಲಿನೊಳಗೆ ರೂಪಿಸಲು ಸಾಧ್ಯವಿಲ್ಲ. ಆದ್ದರಿಂದ ಜೈಲಿನ 25 ಖೈದಿಗಳು ಬರೆದಿರುವ ಪತ್ರದಲ್ಲಿ ಮಾಡಿರುವ ಆರೋಪಗಳಲ್ಲಿ ಹುರುಳಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜೈಲುಕೋಣೆಯೊಳಗೆ ಆಫೀಸ್‌ರೂಂ

ಯುನಿಟೆಕ್ ಎಂಡಿ ಸಂಜಯ್‌ಚಂದ್ರ ಹಾಗೂ ಆತನ ಸಹೋದರನನ್ನು ಬಂಧಿಸಿಟ್ಟಿರುವ ಜೈಲಿನ ಕೋಣೆಯಲ್ಲಿ ಹಾಸಿಗೆ, ಸಾಸಿವೆ ಎಣ್ಣೆ, ಕಾಲೊರೆಸುವ ಬಟ್ಟೆ, ಕುಳಿತುಕೊಳ್ಳುವ ಸ್ಟೂಲ್‌ಗಳು, ಟಿವಿ, ‘ಅಕ್ವಾಫಿನಾ’ ಮಿನರಲ್ ವಾಟರ್, ಬ್ಯಾಡ್ಮಿಂಟನ್ ರ್ಯಾಕೆಟ್‌ಗಳ ಜೊತೆ ಜೈಲಿನ ಕೋಣೆಯೊಳಗೆ ಪ್ರತ್ಯೇಕ ಆಫೀಸ್ ಕೋಣೆಯನ್ನು ನಿರ್ಮಿಸಲಾಗಿದೆ.

ಆಫೀಸ್ ಕೋಣೆಯಲ್ಲಿ ಇಂಟರ್‌ನೆಟ್ ಸಂಪರ್ಕವಿರುವ ಕಂಪ್ಯೂಟರ್ ಹಾಗೂ ಪ್ರಿಂಟರ್‌ಗಳಿವೆ ಎಂದು ರಮೇಶ್ ಕುಮಾರ್ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News