ಕಾಶ್ಮೀರದಲ್ಲಿ ಬಿಜೆಪಿ- ಪೀಪಲ್ಸ್ ಕಾನ್ಫರೆನ್ಸ್ ಮೈತ್ರಿಕೂಟಕ್ಕೆ ರಾಜ್ಯಪಾಲರ ನೆರವು: ಕಾಂಗ್ರೆಸ್ ಆರೋಪ

Update: 2018-11-22 14:32 GMT
ಸತ್ಯಪಾಲ್ ಮಲಿಕ್

ಶ್ರೀನಗರ, ನ.22: ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ರಾಜ್ಯದಲ್ಲಿ ಪೀಪಲ್ಸ್ ಕಾನ್ಫರೆನ್ಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸುವ ಪ್ರಯತ್ನಕ್ಕೆ ನೆರವಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ-ಪೀಪಲ್ಸ್ ಕಾನ್ಫರೆನ್ಸ್ ಮೈತ್ರಿಕೂಟ ಕೇವಲ 30 ಸ್ಥಾನಗಳನ್ನು ಹೊಂದಿದ್ದರೂ ಮೈತ್ರಿಕೂಟಕ್ಕೆ ರಾಜ್ಯಪಾಲರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನೆರವಾಗಿದ್ದಾರೆ. ಈ ಮೂಲಕ ತಮ್ಮ ಬೆಂಬಲಿಗರ ಸಂಖ್ಯೆಯನ್ನು 50ಕ್ಕೇರಿಸಿಕೊಂಡು ಸರಕಾರ ರಚಿಸುವ ಉದ್ದೇಶವಿತ್ತು ಎಂದು ಶ್ರೀನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿ.ಎ.ಮೀರ್ ಆರೋಪಿಸಿದ್ದಾರೆ.

ರಾಜ್ಯಪಾಲರಿಗೆ ಪಿಡಿಪಿ-ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟವನ್ನು ಆಹ್ವಾನಿಸುವ ಆಯ್ಕೆ ಮಾತ್ರವಿತ್ತು. ರಾಜ್ಯಕ್ಕೆ ನೀಡಲಾಗಿರುವ ವಿಶೇಷ ರಾಜ್ಯದ ಸ್ಥಾನಮಾನವನ್ನು ಕಾಯ್ದುಕೊಳ್ಳಲು ಕಾಂಗ್ರೆಸ್ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದವರು ಹೇಳಿದ್ದಾರೆ. ಪಾಕಿಸ್ತಾನದ ಆದೇಶದಂತೆ ಪಿಡಿಪಿ-ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ರಚನೆಯಾಗಿದೆ ಎಂಬ ಬಿಜೆಪಿ ರಾಷ್ಟ್ರೀಯ ವಕ್ತಾರ ರಾಮಮಾಧವ್ ಹೇಳಿಕೆಯನ್ನು ಟೀಕಿಸಿದ ಅವರು, ಇಂತಹ ಹೇಳಿಕೆ ಈಗ ಅಭ್ಯಾಸವಾಗಿಬಿಟ್ಟಿದೆ. ಬಿಜೆಪಿಯನ್ನು ಬೆಂಬಲಿಸುವವರು ದೇಶಭಕ್ತ ಭಾರತೀಯರು, ಬಿಜೆಪಿಯನ್ನು ಪ್ರಶ್ನಿಸುವವರಿಗೆ ರಾಷ್ಟ್ರವಿರೋಧಿ ಅಥವಾ ಪಾಕಿಸ್ತಾನ ಪರ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಮುಖ್ಯವಾಹಿನಿಯ ಪಕ್ಷವೊಂದರ ಚುನಾಯಿತ ಸದಸ್ಯರ ವಿರುದ್ಧ ಪಾಕ್ ಪರ ಕೆಲಸ ಮಾಡುತ್ತಿರುವ ಆರೋಪ ಹೊರಿಸಲಾಗುತ್ತದೆ. ಇಂತಹ ಆರೋಪ ಸುಳ್ಳು ಎಂದು ನೀವು ಪುರಾವೆ ಒದಗಿಸಬೇಕಾಗುತ್ತದೆ ಎಂದು ಮೀರ್ ಹೇಳಿದರು.

ಜಮ್ಮು ಕಾಶ್ಮೀರದಲ್ಲಿ ಸರಕಾರ ರಚಿಸಲು ಮೆಹಬೂಬ ಮುಫ್ತಿ ನೇತೃತ್ವದ ಪಿಡಿಪಿ ಹಾಗೂ ಪೀಪಲ್ಸ್ ಕಾನ್ಫರೆನ್ಸ್ ಮುಖಂಡ ಸಜ್ಜದ್ ಲೋನೆ ಹಕ್ಕು ಮಂಡಿಸಿರುವಂತೆಯೇ ರಾಜ್ಯಪಾಲರು ಬುಧವಾರ ವಿಧಾನಸಭೆಯನ್ನು ವಿಸರ್ಜಿಸಿದ್ದರು. ಕಳೆದ ಜೂನ್‌ನಲ್ಲಿ ಪಿಡಿಪಿ ಜೊತೆಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡಂದಿನಿಂದ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವಿದೆ. ವಿಧಾನಸಭೆಯನ್ನು ವಿಸರ್ಜಿಸಿದ ರಾಜ್ಯಪಾಲರ ನಡೆಯನ್ನು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಟೀಕಿಸಿದ್ದಾರೆ.

ವೆಸ್ಟ್‌ಮಿನಿಸ್ಟರ್ (ಇಂಗ್ಲೆಂಡ್)ಶೈಲಿಯ ಪ್ರಜಾಪ್ರಭುತ್ವ ಹಳೆಯದಾಗಿದೆ. ಈಗೇನಿದ್ದರೂ ಗುಜರಾತ್ ಶೈಲಿಯ ಪ್ರಜಾಪ್ರಭುತ್ವದ ದರ್ಬಾರು ನಡಿಯುತ್ತಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. ಸರಕಾರ ರಚಿಸಲು ಪಕ್ಷವೊಂದು ಹಕ್ಕು ಮಂಡಿಸಿದಾಕ್ಷಣ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದ ವ್ಯವಸ್ಥೆ ಈಗ ತಲೆಕೆಳಗಾಗಿ ನಿಂತಿದೆ ಎಂದು ಚಿದಂಬರಂ ಮತ್ತೊಂದು ಟ್ವೀಟ್ ಮಾಡಿದ್ದಾರೆ. ರಾಜ್ಯಪಾಲರ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲು ಪಿಡಿಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News