ಜನರಿಗೆ ಉದ್ಯೋಗ, 15 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿ ಮೋದಿಯಿಂದ ವಂಚನೆ: ರಾಹುಲ್ ಗಾಂಧಿ

Update: 2018-11-24 17:17 GMT

ಸಾಗರ್/ದಾಮೋಹ್ (ಮದ್ಯಪ್ರದೇಶ), ನ. 24: ಉದ್ಯೋಗ ಭರವಸೆ ಹಾಗೂ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಠೇವಣಿ ಜಮಾ ಮಾಡಲಾಗುವುದು ಎಂದು ನೀಡಿದ ಭರವಸೆ ಈಡೇರಿಸದೆ ಮೋದಿ ಅವರು ಜನರನ್ನು ವಂಚಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

 ನವೆಂಬರ್ 28ರಂದು ವಿಧಾನ ಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸಾಗರ್‌ನಲ್ಲಿ ರ್ಯಾಲಿ ಉದ್ದೇಶಿ ರಾಹುಲ್ ಗಾಂಧಿ ಮಾತನಾಡಿದರು. ಪ್ರತಿವರ್ಷ 2 ಕೋಟಿ ಜನರಿಗೆ ಉದ್ಯೋಗ ಹಾಗೂ ವಿದೇಶದಲ್ಲಿ ಇರುವ ಕಪ್ಪು ಹಣ ಹಿಂದೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡಲಾಗುವುದು ಎಂದು ನೀಡಿದ ಭರವಸೆ ಈಡೇರಿಸದೆ ಮೋದಿ ಅವರು ಜನರಿಗೆ ವಂಚಿಸಿದ್ದಾರೆ ಎಂದು ಅವರು ಹೇಳಿದರು.

2014ರ ಲೋಕಸಭಾ ಚುನಾವಣೆ ಸಂದರ್ಭ ಮೋದಿ ಅವರಿಗೆ ಕಪ್ಪು ಹಣ ಪ್ರಮುಖ ಚುನಾವಣಾ ವಿಷಯವಾಗಿತ್ತು. ವಿದೇಶದಲ್ಲಿರುವ ಕಪ್ಪು ಹಣ ಹಿಂದೆ ತರುವುದಾಗಿ ಅವರು ಜನರಿಗೆ ಭರವಸೆ ನೀಡಿದ್ದರು ಎಂದು ಅವರು ತಿಳಿಸಿದರು.

 ದಾಮೋಹ್‌ನಲ್ಲಿ ಇನ್ನೊಂದು ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 2019ರ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮೋದಿ ಅವರು ಕಾಂಗ್ರೆಸ್ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದರು.

 ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶಿಸ್ತಿನಿಂದ ಮಾತನಾಡುತ್ತಾರೆ. ಆದರೆ, ಮೋದಿ ಅವರು ಕಾಂಗ್ರೆಸ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸುವಾಗ ಶಿಸ್ತಿನ ಕೊರತೆ ಕಾಣುತ್ತದೆ ಎಂದರು.

  ನೀವು ಯಾವಾಗಲಾದರೂ ಮೋದಿ ಅವರ ಭಾಷಣ ಕೇಳಿದಾಗ, ಅವರು ತಪ್ಪು ಪದ ಬಳಸಿರುವುದು, ದ್ವೇಷದಿಂದ ಮಾತನಾಡಿರುವುದು ಕಂಡು ಬರುತ್ತದೆ. ಅಲ್ಲದೆ ಅವರು ತಮ್ಮ ಭಾಷಣದಲ್ಲಿ ಸುಳ್ಳನ್ನೇ ಹೇಳುತ್ತಾರೆ. ಈಗ ಯುವಕರು ಹಾಗೂ ಇತರರ ನಂಬಿಕೆ ಛಿದ್ರವಾಗಿದೆ. ಮೋದಿ ಬಂದರೆ ಸುಳ್ಳು ಮಾತನಾಡುತ್ತಾರೆ ಎಂದು ಜನರು ಹೇಳುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News