ರಾಸಾಯನಿಕ ಅಸ್ತ್ರ: ಅಮೆರಿಕದ ಆರೋಪಗಳು ಅಪಾಯಕಾರಿ; ಇರಾನ್

Update: 2018-11-24 17:07 GMT

ಟೆಹರಾನ್, ನ. 24: ಇರಾನ್ ರಾಸಾಯನಿಕ ಅಸ್ತ್ರಗಳ ಕಾರ್ಯಕ್ರಮವನ್ನು ಹೊಂದಿದೆ ಎಂಬುದಾಗಿ ಅಮೆರಿಕ ಮಾಡಿರುವ ಆರೋಪಗಳು ‘ಅಶ್ಲೀಲ ಮತ್ತು ಅಪಾಯಕಾರಿ’ಯಾಗಿವೆ ಎಂದು ಇರಾನ್‌ನ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಹೇಳಿದ್ದಾರೆ.

ಇರಾನ್ ಜೊತೆಗೆ ಪ್ರಬಲ ದೇಶಗಳು 2015ರಲ್ಲಿ ಮಾಡಿಕೊಂಡಿರುವ ಪರಮಾಣು ಒಪ್ಪಂದದಿಂದ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಈ ವರ್ಷದ ಮೇ ತಿಂಗಳಲ್ಲಿ ಹಿಂದೆಗೆದಿರುವುದನ್ನು ಸ್ಮರಿಸಬಹುದಾಗಿದೆ. ಆ ಬಳಿಕ, ಇರಾನ್ ರಾಸಾಯನಿಕ ಅಸ್ತ್ರಗಳ ಕಾರ್ಯಕ್ರಮವನ್ನು ಹೊಂದಿದೆ ಎಂಬುದಾಗಿ ಅಮೆರಿಕ ಆರೋಪಿಸಿದೆ ಹಾಗೂ ಅದರ ಮೇಲೆ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ.

‘‘ಇರಾನ್ ವಿರುದ್ಧ ಆರೋಪಗಳನ್ನು ಮಾಡಲು ಅಮೆರಿಕ ಅಂತಾರಾಷ್ಟ್ರೀಯ ಒಪ್ಪಂದಗಳ ಮೊರೆ ಹೋಗುತ್ತದೆ. ಆದರೆ, ಇಂಥ ಒಪ್ಪಂದಗಳನ್ನು ಉಲ್ಲಂಘಿಸುವುದನ್ನು ಸ್ವತಃ ಅಮೆರಿಕವೇ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ’’ ಎಂಬುದಾಗಿ ಶರೀಫ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

‘‘ಇರಾನ್ ವಿರುದ್ಧ ರಾಸಾಯನಿಕ ಅಸ್ತ್ರಗಳನ್ನು ಬಳಸಲು ಇರಾಕ್‌ಗೆ ಬೆಂಬಲ ನೀಡಿದ್ದ ಹಾಗೂ ಬಳಿಕ ಇರಾಕ್‌ನ ರಾಸಾಯನಿಕ ಅಸ್ತ್ರಗಳನ್ನು ನಿರ್ಮೂಲಗೊಳಿಸಲು ಆ ದೇಶದ ಮೇಲೆ ದಾಳಿ ನಡೆಸಿರುವ ದೇಶವೊಂದು ‘ಸಾಮೂಹಿಕ ನಾಶಕ ಅಸ್ತ್ರಗಳ’ ಬಗ್ಗೆ ಆರೋಪಗಳನ್ನು ಮಾಡುವುದು ಅಶ್ಲೀಲ ಮಾತ್ರವಲ್ಲ, ಅಪಾಯಕಾರಿಯೂ ಹೌದು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News