ಗಂಗಾ ನದಿಯ 940 ಅಣೆಕಟ್ಟು, ಬ್ಯಾರೇಜ್‌ಗಳಿಂದ ನೀರಿನ ಹರಿವಿಗೆ ಪ್ರತಿಬಂಧ: ಪರಿಸರ ತಜ್ಞರು
ಹೊಸದಿಲ್ಲಿ, ನ. 24: ಗಂಗಾ ನದಿ ಹರಿಯುವಿಕೆ ನಿರ್ಬಂಧಿಸಲಾಗಿದೆ. 900ಕ್ಕೂ ಅಧಿಕ ಒಡ್ಡು, ಬ್ಯಾರೇಜ್, ಅಣೆಕಟ್ಟುಗಳು ಗಂಗಾ ನದಿಯ ಪುನರುಜ್ಜೀನವಕ್ಕೆ ಬೆದರಿಕೆ ಒಡ್ಡಿವೆ ಎಂದು ಪರಿಸರ ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಂಗಾ ನದಿ ಪುನರುಜ್ಜೀವನಕ್ಕೆ ನದಿ ಹರಿವು ಸುಧಾರಿಸಬೇಕು. ನಗರಗಳು ಘನ ತ್ಯಾಜ್ಯವನ್ನು ನದಿಗೆ ಹರಿಸುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.
ಸರಕಾರ ಗಂಗಾ ನದಿ ಸ್ವಚ್ಛತೆಗೆ ಗಮನ ಕೇಂದ್ರೀಕರಿಸಿದೆ ಹೊರತು ಪುನರುಜ್ಜೀವನಕ್ಕೆ ಗಮನ ಕೇಂದ್ರೀಕರಿಸಿಲ್ಲ. ನದಿ ಪುನರುಜ್ಜೀವನದಲ್ಲಿ ನದಿ ನೀರು ಹರಿವು ಸುಧಾರಿಸುವುದು ತುಂಬಾ ಮುಖ್ಯವಾದ ಅಂಶ ಎಂದು ಪರಿಸರ ತಜ್ಞ ಹಾಗೂ ಜಲ ನಿರ್ವಹಣಾ ತಜ್ಞ ರವಿ ಚೋಪ್ರಾ ಹೇಳಿದ್ದಾರೆ.
ಇಲ್ಲಿ ‘ಭಾರತಕ್ಕೆ ಗಂಗಾ ನದಿ ಪುನರುಜ್ಜೀನವಗೊಳಿಸಲು ಸಾಧ್ಯವೇ ?’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಂಟಿಯಾಗಿ ವಿಚಾರ ಮಂಡಿಸಿದ ಪರಿಸರ ತಜ್ಞರು, ಗಂಗಾ ನದಿಯಲ್ಲಿ 900ಕ್ಕೂ ಅಧಿಕ ಅಣೆಕಟ್ಟು, ಬ್ಯಾರೇಜ್ ಹಾಗೂ ಒಡ್ಡುಗಳನ್ನು ಕಟ್ಟಲಾಗಿದೆ. ಇದು ನದಿ ಹರಿವಿಗೆ ಅಡ್ಡಿ ಉಂಟು ಮಾಡುತ್ತಿದೆ. ಇದು ಗಂಗಾ ನದಿ ಪುನರುಜ್ಜೀವನಕ್ಕೆ ಅತಿ ದೊಡ್ಡ ಬೆದರಿಕೆ ಎಂದರು.
ನಗರಗಳು ಘನ ತ್ಯಾಜ್ಯ ಬಿಡುಗಡೆ ಮಾಡುವುದು ಹಾಗೂ ನಗರಸಭೆ, ಕೈಗಾರಿಕಾ ತ್ಯಾಜ್ಯ ಬಿಡುಗಡೆ ಮಾಡುವುದು ಗಂಗಾ ನದಿ ನೀರು ಮಾಲಿನ್ಯಗೊಳ್ಳಲು ಪ್ರಮುಖ ಕಾರಣ ಎಂದು ಇನ್ನೋರ್ವ ಪರಿಸರ ತಜ್ಞ ಮನೋಜ್ ಮಿಶ್ರಾ ಅಭಿಪ್ರಾಯಪಟ್ಟರು.
ಗಂಗಾ ನದಿ ಒಟ್ಟು ಮಾಲಿನ್ಯದಲ್ಲಿ ಶೇ. 80 ಚರಂಡಿ ನೀರು ಕಾರಣ. ನದಿಗೆ ಬಿಡುಗಡೆ ಮಾಡುವ ಒಟ್ಟು ಚರಂಡಿ ನೀರಿನಲ್ಲಿ ಶೇ. 52ನ್ನು ಸಂಸ್ಕರಿಸದೆ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಜಲ ಸಂಪನ್ಮೂಲದ ಮಾಜಿ ವಿಶೇಷ ಕಾರ್ಯದರ್ಶಿ ಶಶಿಶೇಖರ್, ನದಿ ನೀರಿನ ಸಹಜ ಹರಿವನ್ನು ಅರ್ಥ ಮಾಡಿಕೊಳ್ಳುವ ಅಗತ್ಯತೆ ಇದೆ ಹಾಗೂ ನದಿ ನೀರನ್ನು ಸ್ವಚ್ಚಗೊಳಿಸುವುದು ನದಿ ಪುನರುಜ್ಜೀವನ ಅಲ್ಲ ಎಂದು ಹೇಳಿದ್ದಾರೆ.