ಕೇಂದ್ರದ ವೈಫಲ್ಯ ಮುಚ್ಚಿಡಲು ರಾಮ ಮಂದಿರ ಚಳವಳಿ: ಮಾಯಾವತಿ

Update: 2018-11-24 18:09 GMT

ಹೊಸದಿಲ್ಲಿ, ನ. 24: ಬಿಜೆಪಿ ತನ್ನ ಮಿತ್ರ ಪಕ್ಷವಾದ ಶಿವಸೇನೆ ಹಾಗೂ ಅಂಗಸಂಸ್ಥೆಯಾದ ವಿಶ್ವಹಿಂದೂ ಪರಿಷತ್‌ನೊಂದಿಗೆ ಸೇರಿಕೊಂಡು ರಾಮ ಜನ್ಮಭೂಮಿ ಚಳವಳಿ ಆಯೋಜಿಸುತ್ತಿರುವುದು ಮುಂಬರುವ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಆಡಳಿತದ ವಿಫಲತೆಯ ಕುರಿತ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಶನಿವಾರ ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಸೋಲಾಗಲಿದೆ ಎಂಬುದು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿದಿದೆ. ಆದುದರಿಂದ ಅವರು ಶಿವಸೇನೆ, ಆರ್‌ಎಸ್‌ಎಸ್ ಹಾಗೂ ವಿಎಚ್‌ಪಿಯೊಂದಿಗೆ ಸೇರಿಕೊಂಡು ರಾಮ ಮಂದಿರ ವಿವಾದವನ್ನು ಕೆದಕುತ್ತಿದ್ದಾರೆ ಎಂದರು.

2014ರ ಲೋಕಸಭಾ ಚುನಾವಣೆಯ ಸಂದರ್ಭ ಬಿಜೆಪಿ, ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಯಲ್ಲಿ ಶೇ. 50ನ್ನೂ ಪೂರೈಸಿಲ್ಲ ಎಂದು ಅವರು ಹೇಳಿದರು.

ಪ್ರಸ್ತುತ ವಿಧಾನ ಸಭೆ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬ ಬಗ್ಗೆ ಅವರಿಗೆ ತಿಳಿದಿದೆ. ಆದುದರಿಂದ ಅವರು ರಾಮ ಮಂದಿರ ವಿವಾದವನ್ನು ಕೆದಕುತ್ತಿದ್ದಾರೆ. ಒಂದು ವೇಳೆ ಅವರ ಮನಸ್ಥಿತಿ ಸರಿಯಾಗಿದ್ದಿದ್ದರೆ, ಅವರು ಕೆಲವು ವರ್ಷಗಳ ಹಿಂದೆಯೇ ಈ ವಿಷಯವನ್ನು ಎತ್ತುತ್ತಿದ್ದರು. ಇದು ಅವರ ರಾಜಕೀಯ ತಂತ್ರ ಎಂದು ಮಾಯಾವತಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರವಿವಾರ ಶಿವಸೇನೆ, ವಿಎಚ್‌ಪಿ ಹಾಗೂ ಕೆಲವು ಹಿಂದೂ ಗುಂಪುಗಳು ಧರ್ಮ ಸಭೆ ಆಯೋಜಿಸಿದ ಹಿನ್ನೆಲೆಯಲ್ಲಿ ಮಾಯಾವತಿ ಅವರು ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News