ಉದ್ವಿಗ್ನ ಅಯೋಧ್ಯೆಯಲ್ಲಿ ಬಿಜೆಪಿಗೆ ಶಿವಸೇನೆ ಸವಾಲು

Update: 2018-11-25 03:47 GMT

ಅಯೋಧ್ಯೆ, ನ.25: ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಡ ತರುವ ಸಲುವಾಗಿ ಆಯೋಜಿಸಿರುವ ಧರ್ಮಸಭೆ ಹಿನ್ನೆಲೆಯಲ್ಲಿ ಇಡೀ ನಗರಕ್ಕೆ ಪೊಲೀಸ್ ಸರ್ಪಗಾವಲು ಹಾಕಿರುವ ನಡುವೆಯೇ, ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿಗೆ ಸವಾಲು ಹಾಕಿದ್ದಾರೆ.

ಕರಸೇವಕರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದ್ದು, ಆದಿತ್ಯನಾಥ್ ಅವರ ಸ್ವಕ್ಷೇತ್ರವಾದ ಗೋರಖ್‌ಪುರದಿಂದಲೇ 50 ಸಾವಿರ ಕರಸೇವಕರು ಆಗಮಿಸಿದ್ದಾರೆ. ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಯೋಗಿ, ರವಿವಾರ ಲಕ್ನೋದಲ್ಲೇ ಉಳಿಯಲಿದ್ದು, ಅಯೋಧ್ಯೆ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಅವರ ಕಚೇರಿ ಸ್ಪಷ್ಟಪಡಿಸಿದೆ.

ರಾಮಮಂದಿರಕ್ಕೆ ಅಗತ್ಯವಾದ ಶಿಲಾಸ್ತಂಭಗಳನ್ನು ಕೆತ್ತಲಾಗಿರುವ ರಾಮಜನ್ಮಭೂಮಿ ಕಾರ್ಯಶಾಲೆಗೆ ಶಿವಸೈನಿಕರು ಶನಿವಾರ ಭೇಟಿ ನೀಡಿದರು. ಬಳಿಕ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಲಕ್ಷ್ಮಣ್ ಕ್ವಿಲಾದಲ್ಲಿ ಸಂತರನ್ನು ಭೇಟಿ ಮಾಡಿ ಸರಯೂ ಆರತಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನ್ಯಾಯಾಲಯದ ಆದೇಶಕ್ಕೆ ಕಾಯದೇ ಮಸೀದಿ ಧ್ವಂಸದ ನಿರ್ಧಾರವನ್ನು ತೆಗೆದುಕೊಳ್ಳಬಹುದಾದರೆ, ಮಂದಿರ ನಿರ್ಮಾಣ ನಿರ್ಧಾರವನ್ನು ಏಕೆ ಕೈಗೊಳ್ಳಬಾರದು" ಎಂದು ಪ್ರಶ್ನಿಸಿದರು.

ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ರವಿವಾರದ ಧರ್ಮಸಭೆಗೆ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ಬಾಬರಿ ಮಸೀದಿ- ಸುತ್ತಮುತ್ತಲ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ನಗರದಲ್ಲಿ ಹಲವು ಸ್ತರಗಳ ಭದ್ರತಾ ವ್ಯವಸ್ಥೆ ಆಯೋಜಿಸಲಾಗಿದೆ. ಶಿವಸೇನೆ ಹಾಗೂ ವಿಶ್ವ ಹಿಂದೂ ಪರಿಷತ್ ಆಯೋಜಿಸಿದೆರಡೂ ಸಭೆಗಳು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಹಾಗೂ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಬರುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಪಾಲನೆ ನಿಟ್ಟಿನಲ್ಲಿ ಅಗತ್ಯ ಭದ್ರತೆ ಒದಗಿಸಲಾಗಿದೆ ಎಂದು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆನಂದ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News