ಅಯೋಧ್ಯೆ ವಿಚಾರಣೆ ತಡ ಮಾಡುವಂತೆ ಸುಪ್ರೀಂ ಕೋರ್ಟ್ ಗೆ ಕಾಂಗ್ರೆಸ್ ನಿಂದ ಮನವಿ: ಮೋದಿ ಆರೋಪ
Update: 2018-11-25 16:18 IST
ಹೊಸದಿಲ್ಲಿ, ನ.25; ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಆಕ್ರೋಶಗಳು ಭುಗಿಲೇರುತ್ತಿರುವ ನಡುವೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, 2019ರ ಚುನಾವಣೆ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ತಡ ಮಾಡಬೇಕು ಎಂದು ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ ಹೇಳಿದ್ದು, ನ್ಯಾಯಾಧೀಶರ ವಿರುದ್ಧ ವಾಗ್ದಂಡನೆ ವಿಧಿಸುವುದಾಗಿ ಕಾಂಗ್ರೆಸ್ ನಾಯಕರು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಸ್ಥಾನದ ಆಲ್ವಾರ್ ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ನ್ಯಾಯಾಂಗವನ್ನು ಕಾಂಗ್ರೆಸ್ ರಾಜಕೀಯಕ್ಕೆ ಎಳೆದು ತರುತ್ತಿದೆ. 2019ರ ಚುನಾವಣೆಯ ಹಿನ್ನೆಲೆಯಲ್ಲಿ ಅಯೋಧ್ಯೆ ವಿಚಾರಣೆಯನ್ನು ತಡ ಮಾಡುವಂತೆ ಸುಪ್ರೀಂ ಕೋರ್ಟ್ ಗೆ ಕಾಂಗ್ರೆಸ್ ನ ಒಬ್ಬ ನಾಯಕರು ಹೇಳಿದ್ದಾರೆ. ಆದರೆ ಅವರ ಬೇಡಿಕೆಯನ್ನು ನ್ಯಾಯಾಧೀಶರು ಒಪ್ಪದಿದ್ದಾಗ ವಾಗ್ದಂಡನೆ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಅವರು ಬೆದರಿಸುತ್ತಿದ್ದಾರೆ. ಇಂತಹ ವಿಷಯಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ?” ಎಂದವರು ಹೇಳಿದರು.