ಶಬರಿಮಲೆ: ನಿಷೇಧಾಜ್ಞೆ ಉಲ್ಲಂಘಿಸಿದ 60 ಯಾತ್ರಿಗಳ ಬಂಧನ
Update: 2018-11-25 20:22 IST
ತಿರುವನಂತಪುರ, ನ.25: ನಿಷೇಧಾಜ್ಞೆಯ ಹೊರತಾಗಿಯೂ, ಭದ್ರತಾ ವಲಯವನ್ನು ಬೇಧಿಸಿ ಅಯ್ಯಪ್ಪ ನಾಮಸ್ಮರಣೆ ಮಾಡುತ್ತಾ ಶಬರಿಮಲೆಯತ್ತ ಮುಂದುವರಿಯುತ್ತಿದ್ದ 60 ಯಾತ್ರಿಗಳನ್ನು ಶಬರಿಮಲೆಯ ವವರುನಾಡ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಶಬರಿಮಲೆ ದೇವಸ್ಥಾನದ ಬಳಿ ನಡೆದ ಹಿಂಸಾಚಾರದ ಘಟನೆಯ ಹಿನ್ನೆಲೆಯಲ್ಲಿ ದೇವಸ್ಥಾನದ ಒಳಗೆ ಪ್ರವೇಶಬಯಸುವ ಯಾತ್ರಿಗಳಿಗೆ ಪೊಲೀಸರು ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾರೆ. ಸೆಕ್ಷನ್ 144 ಜಾರಿಯಲ್ಲಿದ್ದು ನಾಲ್ಕಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ ಎಂಬ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ಯಾತ್ರಿಗಳನ್ನು ಬಂಧಿಸಿ ಪಂಬ(ಪಂಪ) ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಶಬರಿಮಲೆಯ ವಾರ್ಷಿಕ ‘ಮಂಡಲ-ಮಕರವಿಳಕ್ಕು’ ಕಾರ್ಯಕ್ರಮಕ್ಕಾಗಿ ನವೆಂಬರ್ 17ರಿಂದ 2 ತಿಂಗಳಾವಧಿಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು ಇದುವರೆಗೆ ನಿಷೇಧಾಜ್ಞೆ ಉಲ್ಲಂಘಿಸಿದ ನೂರಾರು ಯಾತ್ರಿಗಳನ್ನು ಬಂಧಿಸಲಾಗಿದೆ. ಬಂಧಿತ ಯಾತ್ರಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.