ಅಯೋಧ್ಯೆಯಲ್ಲಿ ಆತಂಕದ ವಾತಾವರಣ: ಹಿಂಸಾಚಾರ ಭೀತಿಯಿಂದ ನಗರ ಬಿಟ್ಟು ತೆರಳುತ್ತಿರುವ ಮುಸ್ಲಿಮರು

Update: 2018-11-25 15:11 GMT

ಅಯೋಧ್ಯೆ, ನ.25: ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಆಯೋಜಿಸಿರುವ ಬೃಹತ್ ಸಮಾವೇಶವು, 1992ರ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ನಡೆದ ಹಿಂಸಾಚಾರದ ದಿನಗಳ ಕರಾಳನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.

ಯಾವುದೇ ಸಮಯದಲ್ಲಿ ಹಿಂಸೆ ಭುಗಿಲೇಳಬಹುದೆಂಬ ಭೀತಿಯಿಂದ ಕೆಲವು ಮುಸ್ಲಿಂ ಕುಟುಂಬಗಳು ಅಯೋಧ್ಯೆಯಿಂದ ನಿರ್ಗಮಿಸತೊಡಗಿವೆ. ಇನ್ನು ಕೆಲವು ಕುಟುಂಬಗಳು ತಾತ್ಕಾಲಿಕವಾಗಿ ಮನೆಯಿಂದ ನಿರ್ಗಮಿಸಿರುವುದಾಗಿ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

 ಅಯೋಧ್ಯೆ ಹಾಗೂ ಅದರ ಅವಳಿ ನಗರವಾದ ಫೈಝಾಬಾದ್‌ನಲ್ಲಿ ಈಗಾಗಲೇ ಭಾರೀ ಭದ್ರತಾ ನಿಯೋಜನೆಯನ್ನು ಮಾಡಿರುವ ಹೊರತಾಗಿಯೂ ಮುಸ್ಲಿಂ ಕುಟುಂಬಗಳು, ಮನೆಬಿಟ್ಟು ತೆರಳಲು ನಿರ್ಧರಿಸಿವೆ. 1992ರ ‘ಕರಸೇವೆ’ಯ ಬಳಿಕ ಅಯೋಧ್ಯೆಯಲ್ಲಿ ರಾಮಭಕ್ತರ ಬೃಹತ್ ಸಮಾವೇಶವೆಂದು ಬಣ್ಣಿಸಲಾದ ವಿಶ್ವಹಿಂದೂ ಪರಿಷತ್‌ನ ‘ಧರ್ಮಸಭಾ’ದ ಹಿನ್ನೆಲೆಯಲ್ಲಿ ಉಂಟಾಗಿರುವ ಗದ್ದಲ ಹಾಗೂ ಪ್ರಚೋದನಕಾರಿ ಭಾಷಣಗಳಿಂದಾಗಿ ಆತಂಕಗೊಂಡಿರುವ ಕೆಲವು ಮುಸ್ಲಿಂ ಕುಟುಂಬಗಳು ಮನೆಯಿಂದ ನಿರ್ಗಮಿಸಿವೆ.

ಫೈಝಾಬಾದ್‌ನ ಮುಸ್ಲಿಂ ಬಾಹುಳ್ಯದ ಪ್ರದೇಶಗಳಾದ ಧರಮ್ ಕಾಂತ, ಖ್ವಾಝಿಯಾನಾ ಹಾಗೂ ಕಟ್ರಾಗಳಲ್ಲಿ ಈಗಾಗಲೇ ಭಾರೀ ಭೀತಿಯ ವಾತಾವರಣ ನೆಲೆಸಿದೆ.

ಮಠಾಧೀಶರು, ಸಾಧುಗಳು ಸೇರಿದಂತೆ ಮೂರು ಲಕ್ಷಕ್ಕೂ ಅಧಿ ಮಂದಿ ಪಾಲ್ಗೊಳ್ಳಲಿರುವ ಧರ್ಮಸಭಾವು, ವಿವಾದಿತ ರಾಮಜನ್ಮಭೂಮಿ ನ್ಯಾಸ್ ನಡೆಸುತ್ತಿರುವ ನಡೆಸುತ್ತಿರುವ ಕಾರ್ಯಾಗಾರದ ಬಳಿಯೇ ನಡೆಯಲಿದೆ. ಈ ಕಾರ್ಯಾಗಾರದಲ್ಲಿ 1990ರೀಂದೀಚೆಗೆ ರಾಮಜನ್ಮಭೂಮಿ ದೇಗುಲದ ನಿರ್ಮಾಣಕ್ಕಾಗಿ ಬೇಕಾದ ಶಿಲ್ಪಕಲಾ ವಸ್ತುಗಳನ್ನು ನಿರ್ಮಿಸಲಾಗುತ್ತಿದೆ.

‘‘ನಾನು ಇಲ್ಲಿ ವಾಸವಾಗಿದ್ದೇನೆ.

ಕೆಲವೇ ದಿನಗಳ ಹಿಂದೆ ಇಲ್ಲಿದ್ದ ನನ್ನ ಹಲವಾರು ಮುಸ್ಲಿಂ ನೆರೆಹೊರೆಯವರು ಈಗ ಊರುಬಿಟ್ಟು ತೆರಳಿದ್ದಾರೆ. ಅವರು ಸಮೀಪದಲ್ಲಿರುವ ತಮ್ಮ ಬಂಧುಗಳ ಮನೆಗೆ ಇಲ್ಲವೇ ತಾತ್ಕಾಲಿಕವಾಗಿ ತಮ್ಮ ವಾಸ್ತವ್ಯವನ್ನು ಅಯೋಧ್ಯೆಯಿಂದ ಹೊರಗೆ ಸ್ಥಳಾಂತರಿ ಸಿದ್ದಾರೆ’’ ಎಂದು ಅಯೋಧ್ಯೆಯ ನಿವಾಸಿ ನಿಶಾ ಹೇಳುತ್ತಾರೆ.

ಇತ್ತ ಅಯೋಧ್ಯೆಯ ಸಮೀಪವೇ ಇರುವ ಸೈದ್‌ ವಾಡ ಹಾಗೂ ಬೇಗಂಪುರಗಳಲ್ಲಿಯೂ ಅಲ್ಪಸಂಖ್ಯಾತ ಸಮುದಾಯದಲ್ಲಿ ಕಳವಳವಳದ ವಾತಾವರಣವುಂಟಾಗಿದೆ.

 1992ರ ಬಾಬರಿ ಮಸೀದಿ ಘಟನೆಯ ಬಗ್ಗೆ ಮಾತನಾಡುವಾಗ 78 ವರ್ಷ ವಯಸ್ಸಿನ ಮುಹಮ್ಮದ್ ಮುಸ್ಲಿಂ ಖಿನ್ನನಾಗುತ್ತಾರೆ. ‘‘ರಾಜಕಾರಣಿಗಳು ಹಾಗೂ ಸಂಘಪರಿವಾರಗಳು ಕೋಮುದ್ವೇಷವನ್ನು ಪ್ರಚೋದಿಸಬಾರದು. ಆಗ ನಾವು ಅಸುರಕ್ಷಿತರಾಗುತ್ತೇವೆ. ಇಂದು ನಮ್ಮ ನಗರದಲ್ಲಿ ಇಷ್ಟೊಂದು ಜನಜಂಗುಳಿ ಉಂಟಾದಾಗ ನಮ್ಮಲ್ಲಿ ಅಸುರಕ್ಷತೆಯ ಭಾವನೆ ಉಂಟಾಗಿದೆ’’.ಎಂದವರು ಹೇಳಿದ್ದಾರೆ.

ರಾಮಮಂದಿರದೇಗುಲದ ನಿರ್ಮಾಣಕ್ಕೆ ಒತ್ತಾಯಿಸಿ ರವಿವಾರದಂದು ಅಯೋಧ್ಯೆಯ ಬೀದಿಗಳಿಗೆ ಸಂಘಪರಿವಾರದ ಕಾರ್ಯಕರ್ತರ ದಂಡೇ ಹರಿದುಬಂದಿದೆ.ಅಯೋಧ್ಯೆಯ ಎಲ್ಲೆಡೆ ಸಾವಿರಾರು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ನಗರವೀಗ ವಸ್ತುಶಃ ಭದ್ರಕೋಟೆಯಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News