ಅಜ್ಮೀರ್ ದರ್ಗಾ ಬಾಂಬ್ ಸ್ಫೋಟ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸುರೇಶ್ ನಾಯರ್ ಬಂಧನ

Update: 2018-11-25 15:54 GMT

ಹೊಸದಿಲ್ಲಿ, ನ.25: 2007ರ ಅಜ್ಮೀರ್ ದರ್ಗಾ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಸುರೇಶ್ ನಾಯರ್ ನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಇಂದು ಬಂಧಿಸಿದೆ. 2007ರಲ್ಲಿ ನಡೆದ ಈ ಬಾಂಬ್ ದಾಳಿಯಲ್ಲಿ 3 ಮಂದಿ ಮೃತಪಟ್ಟು, 17 ಮಂದಿ ಗಾಯಗೊಂಡಿದ್ದರು.

11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸುರೇಶ್ ತಲೆಗೆ ಎನ್ ಐಎ 2 ಲಕ್ಷ ರೂ.ಗಳನ್ನು ಘೋಷಿಸಿತ್ತು. “ಗುಜರಾತ್ ನ ಭಾರುಚ್ ನಲ್ಲಿರುವ ಯಾತ್ರಾ ಸ್ಥಳವೊಂದರಿಂದ ಆತನನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಎಟಿಎಸ್ ಆತನನ್ನು ಅಹ್ಮದಾಬಾದ್ ಗೆ ಕರೆತಂದಿದ್ದು, ಎನ್ ಐಎಗೆ ಹಸ್ತಾಂತರಿಸಿದೆ” ಎಂದು ಎಟಿಎಸ್ ಅಧಿಕಾರಿ ಹಿಮಾಂಶು ಶುಕ್ಲಾ ಮಾಹಿತಿ ನೀಡಿದ್ದಾರೆ.

ಗುಜರಾತ್ ನ ಖೇಡಾ ಜಿಲ್ಲೆಯ ಥಾಸ್ರಾ ನಿವಾಸಿಯಾಗಿರುವ ಸುರೇಶ್ ಸದ್ಯದಲ್ಲಿ ಶುಕ್ಲತೀರ್ಥಕ್ಕೆ ತೆರಳಲಿದ್ದಾನೆ ಎನ್ನುವ ಮಾಹಿತಿ ಗುಜರಾತ್ ಎಟಿಎಸ್ ಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಟಿಎಸ್ ನಿಗಾಯಿರಿಸಿತ್ತು.

ಸಂಚುಗಾರರಿಗೆ ಬಾಂಬ್ ಪೂರೈಕೆ ಮಾತ್ರವಲ್ಲದೆ, ಬಾಂಬನ್ನು ಇರಿಸಿದ್ದ ಸಂದರ್ಭ ಕೂಡ ಆತ ಸ್ಥಳದಲ್ಲೇ ಇದ್ದ ಎಂದು ಎನ್ ಐಎ ತನಿಖೆಯಿಂದ ತಿಳಿದು ಬಂದಿರುವುದಾಗಿ ಎಟಿಎಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News