×
Ad

ಕಾರು ಬ್ಯಾಟರಿ ಕದ್ದ ಆರೋಪ: ಆಟೋ ಚಾಲಕನ ಥಳಿಸಿ ಹತ್ಯೆ, ಇಬ್ಬರು ಗಂಭೀರ

Update: 2018-11-26 13:36 IST

ಹೊಸದಿಲ್ಲಿ, ನ.26: ಕಾರು ಬ್ಯಾಟರಿಗಳನ್ನು ಕಳವುಗೈದಿದ್ದಾರೆಂದು ಆರೋಪಿಸಿ ಮೂವರನ್ನು ಸ್ಥಳೀಯರು ವಿದ್ಯುತ್ ಕಂಬವೊಂದಕ್ಕೆ ಕಟ್ಟಿ ಹಾಕಿ ಥಳಿಸಿದ ಪರಿಣಾಮ ಓರ್ವ ಮೃತಪಟ್ಟು ಇನ್ನಿಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಟೋ ಚಾಲಕ 26 ವರ್ಷದ ಅವಿನಾಶ್ ಸಕ್ಸೇನಾ ಮೃತಪಟ್ಟ ಯುವಕ. ಈತನ ಜತೆಗಿದ್ದ ಮುನ್ನಿ ಪಾಲ್ (26) ಹಾಗೂ ಸೂರಜ್ ಯಾದವ್ (24) ಎಂಬರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಘಟನೆ ಪಶ್ಚಿಮ ದೆಹಲಿಯ ಮೋಹನ್ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ. ಸುಮಾರು 200ರಿಂದ 300ರಷ್ಟಿದ್ದ ಜನರು ಮೂವರನ್ನೂ ಥಳಿಸಿದ್ದರು. ಥಳಿಸುತ್ತಿರುವ ಮಧ್ಯದಲ್ಲಿಯೇ ಸಕ್ಸೇನಾ ಫೋನನ್ನು ಬಳಸಿ ಒಬ್ಬ ಆತನ ಹೆತ್ತವರಿಗೆ ಕರೆ ಮಾಡಿದ್ದು, ಆಗ ಅವಿನಾಶ್ ಮಾತನಾಡಿ ತನ್ನ ಆಟೋದ ದಾಖಲೆಗಳನ್ನು ತರುವಂತೆ ಹೇಳಿದ್ದ. ಆತನ ಹೆತ್ತವರು ಕೂಡಲೇ ಸ್ಥಳಕ್ಕೆ ಧಾವಿಸಿ ತಮ್ಮ ಮಗನಿಗೆ ಥಳಿಸುತ್ತಿರುವುದನ್ನು ಕಂಡು ಆತನನ್ನು ಬಿಟ್ಟು ಬಿಡುವಂತೆ ಗೋಗರೆದರೂ ಪ್ರಯೋಜನವಾಗಿಲ್ಲ.

‘‘ರಕ್ಷಿಸುವಂತೆ ನಮ್ಮ ಮಗ ಅಂಗಲಾಚುತ್ತಿದ್ದ ಆದರೆ ನಾವೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಪ್ರತಿ ಬಾರಿ ಆತನಿಗೆ ಪ್ರಜ್ಞೆ ತಪ್ಪಿದಾಗಲೂ ಆತನ ಮುಖಕ್ಕೆ ನೀರು ಚಿಮುಕಿಸಿ ಮತ್ತೆ ಹೊಡೆಯಲಾಗುತ್ತಿತ್ತು. ನಾವು ಪೊಲೀಸರಿಗೆ ಕರೆ ಮಾಡಲು ಯತ್ನಿಸಿದಾಗ ನಮ್ಮ ಮೊಬೈಲ್ ಫೋನನ್ನು ಸೆಳೆಯಲಾಯಿತು’’ ಎಂದು ಅವಿನಾಶ್ ತಾಯಿ ಕುಸುಮ್ ಲತಾ ಹೇಳುತ್ತಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ಮೌನ ತಾಳಿದ್ದರೂ ತನಿಖಾ ತಂಡದ ಅಧಿಕಾರಿಗಳಲ್ಲೊಬ್ಬರು ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅವಿನಾಶ್ ಡ್ರಗ್ಸ್ ವ್ಯಸನಿಯಾಗಿದ್ದ ಎಂದೂ ಪೊಲೀಸರು ಹೇಳುತ್ತಿದ್ದಾರೆ. ಮೂವರೂ ಕಾರು ಬ್ಯಾಟರಿಗಳನ್ನು ಕದ್ದು ಅವುಗಳನ್ನು ಆಟೋದಲ್ಲಿ ತುಂಬಿಸುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದರೆಂದು ಹೇಳಲಾಗುತ್ತಿದೆ. ಆದರೆ ಅವಿನಾಶ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲ ಎಂದು ಆತನ ಹೆತ್ತವರು ಹೇಳುತ್ತಿದ್ದಾರೆ.

ಆತ ತನ್ನ ಹೆತ್ತವರು, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮೋಹನ್ ಗಾರ್ಡನ್ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ, ರಾತ್ರಿ ಹೊತ್ತು ಆಟೋ ಓಡಿಸುತ್ತಿದ್ದ. ಮನೆಯಿಂದ ಸುಮಾರು 2 ಕಿ.ಮೀ. ದೂರವಿರುವ ಪೀಪಲ್ ಚೌಕ್ ಪ್ರದೇಶದಲ್ಲಿ ಮುಂಜಾವ 3:30ರಿಂದ 7:30ರ ನಡುವೆ ಈ ಘಟನೆ ನಡೆದಿತ್ತು. ನಾಲ್ಕು ಗಂಟೆಗಳ ಕಾಲ ಅವರನ್ನು ಥಳಿಸಲಾಗಿತ್ತು. ಅವರು ಕದ್ದಿದ್ದಾರೆ ಎನ್ನಲಾದ ಬ್ಯಾಟರಿಗಳನ್ನು ಅವರು ತಲೆಯ ಮೇಲೆ ಹೊತ್ತುಕೊಂಡು ಹೋಗುವಂತೆ ಮಾಡಲಾಯಿತು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News