ನೋಟ್ ಬ್ಯಾನ್ ಕ್ರಮವನ್ನು ಪ್ರಶಂಸಿಸಿದರೇ ಕಾಂಗ್ರೆಸ್ ಶಾಸಕ!: ವೈರಲ್ ವಿಡಿಯೋ ಹಿಂದಿನ ಸತ್ಯಾಂಶವಿಲ್ಲಿದೆ

Update: 2018-11-26 10:45 GMT

ಹೊಸದಿಲ್ಲಿ, ನ.26: ಕಾಂಗ್ರೆಸ್ ಶಾಸಕ ರಾಕೇಶ್ ಮೇಘ್ವಾಲ್ ಎಂಬವರು ನೋಟ್ ಬ್ಯಾನ್ ಹಾಗೂ ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ಮೋದಿ ಸರಕಾರವನ್ನು ಹೊಗಳುತ್ತಿದ್ದಾರೆ ಎನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೋಹಿತ್ ಸರ್ದಾನ ಫ್ಯಾನ್ ಕ್ಲಬ್ ಎಂಬ ಫೇಸ್‍ಬುಕ್ ಪುಟದಲ್ಲೂ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಅದರ ಕೆಳಗೆ- ``ಕಾಂಗ್ರೆಸ್ ಶಾಸಕ ರಾಕೇಶ್ ಮೇಘ್ವಾಲ್ ಪ್ರಧಾನಿಯನ್ನು ಹೊಗಳಿದಾಗ ಇತರ ಇಬ್ಬರು ಕಾಂಗ್ರೆಸ್ ಮಂದಿ ಅವರಿಂದ ಮೈಕ್ರೊಫೋನ್ ಸೆಳೆದರು'' ಎಂದು ಬರೆಯಲಾಗಿದೆ. ಈ ಪೋಸ್ಟ್ ಅನ್ನು ಇಲ್ಲಿಯ ತನಕ 6,000ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

ಹಲವಾರು ಇತರ ಫೇಸ್ಬುಕ್ ಫ್ಯಾನ್ ಪುಟಗಳಾದ ರೂಬಿಕಾ ಲಿಯಾಖತ್ ಫ್ಯಾನ್ಸ್ ಕ್ಲಬ್, ಸುಧೀರ್ ಚೌಧುರಿ ಲೈವ್, ಪ್ರೊಫೆಸರ್ ರಾಕೇಶ್ ಸಿನ್ಹಾ ಫ್ಯಾನ್ಸ್ ಕ್ಲಬ್ ಕೂಡ ಇದೇ ವೀಡಿಯೋ ಶೇರ್ ಮಾಡಿವೆ.

ವಾಸ್ತವವೇನು ?

ಗೂಗಲ್ ಸರ್ಚ್ ಮಾಡಿದಾಗ 2016ರಲ್ಲಿ ನಡೆದಿದೆಯೆನ್ನಲಾದ ಈ ಘಟನೆಯ ವಿಡಿಯೋ ಹಲವಾರು ಮಾಧ್ಯಮ ವರದಿಗಳಲ್ಲಿ ಕಾಣಿಸುತ್ತವೆ.  ಒಂದು ವರದಿಯ ಪ್ರಕಾರ ರಾಕೇಶ್ ಮೇಘ್ವಾಲ್ ಮಾಜಿ ಬಿಜೆಪಿ ಶಾಸಕರಾಗಿದ್ದು, ನಗೌರ್ ಜಿಲ್ಲೆಯಲ್ಲಿ ಬಹುಜನ್ ಸಂಘರ್ಷ್ ದಳ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಮುದಾಯದ ನಾಯಕರಾಗಿ ಅವರನ್ನು ಅಲ್ಲಿಗೆ ಆಹ್ವಾನಿಸಲಾಗಿತ್ತೆಂದು ಅವರೇ ಹೇಳಿರುವುದು ವರದಿಯಾಗಿದೆ. ನವೆಂಬರ್ 2016ರಲ್ಲಿ ಅವರು ಈ ಹೇಳಿಕೆ ನೀಡಿದಾಗ ಅವರು ಬಿಜೆಪಿಯಲ್ಲಿದ್ದರು.

ರಾಕೇಶ್ ಮೇಘ್ವಾಲ್ ಮುಂಬರುವ ರಾಜಸ್ತಾನ ವಿಧಾನಸಭಾ ಚುನಾವಣೆಯನ್ನು ಪರ್ಬತ್ಸರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಎದುರಿಸಲಿದ್ದಾರೆ ಎಂಬ ಮಾಹಿತಿ ಅವರ ಫೇಸ್ ಬುಕ್ ಪುಟದಲ್ಲಿದೆ. ಹೀಗೆಯೇ ವೈರಲ್ ಆಗಿರುವ ಇನ್ನೊಂದು ವಿಡಿಯೋದಲ್ಲಿ ರಾಕೇಶ್ ರನ್ನು ಬಿಎಸ್ಪಿ ನಾಯಕರೆಂದು ಹೇಳಲಾಗಿದೆ. ಆದರೆ ವಾಸ್ತವವೇನೆಂದರೆ ವಿಡಿಯೋದಲ್ಲಿರುವ ವ್ಯಕ್ತಿ ಮಾಜಿ ಬಿಜೆಪಿ ಶಾಸಕರೇ ಹೊರತು ಕಾಂಗ್ರೆಸ್ ಶಾಸಕರಾಗಲೀ, ಬಿಎಸ್ಪಿ ನಾಯಕರಾಗಲೀ ಅಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News