ಹೆತ್ತವರನ್ನು ಕಳೆದುಕೊಂಡು ಬದುಕುಳಿದ ಮಗು ಮೋಷೆ ಈಗ ಹೇಗಿದ್ದಾನೆ ನೋಡಿ

Update: 2018-11-26 11:21 GMT

ಇಡೀ ವಿಶ್ವವನ್ನೇ ತಲ್ಲಣಿಸಿದ್ದ ಮುಂಬೈ ಭಯೋತ್ಪಾದಕ ದಾಳಿಗೆ ಇಂದು ಭರ್ತಿ ಹತ್ತು ವರ್ಷ ಮತ್ತು ಈಗಲೂ ಮೋಷೆ ಹೋಝ್‌ಬರ್ಗ್‌ಗೆ ಅದರ ದುಃಸ್ವಪ್ನ ಕಾಡುತ್ತಿದೆ. ಹತ್ತು ವರ್ಷಗಳ ಬಳಿಕ ಈಗಲೂ ಕತ್ತಲೆಂದರೆ ಮೋಷೆ ಹೆದರಿಕೊಳ್ಳುತ್ತಾನೆ ಎನ್ನುತ್ತಾಳೆ ಆತನ ಆಯಾ ಸ್ಯಾಂಡ್ರಾ ಸಾಮ್ಯುಯೆಲ್ಸ್. ಮೋಷೆ ಹೆಚ್ಚು ಮಾತನಾಡುವುದಿಲ್ಲ,ಆದರೆ ರಾತ್ರಿ ಮಲಗುವಾಗ ದೀಪಗಳನ್ನು ಆರಿಸಿದ ಬಳಿಕ ಹಿಂದಿನ ಅಸ್ಪಷ್ಟ ನೆನಪುಗಳು ಆತನನ್ನು ಕಾಡುತ್ತವೆ.

ಮೋಷೆ ಬದುಕಿದ್ದು ಹೇಗೆ?

 ಮುಂಬೈನಲ್ಲಿರುವ ಯಹೂದಿಗಳ ಆರಾಧನಾ ಸ್ಥಳ ಚಾಬಾದ್ ಹೌಸ್‌ನ ಮೇಲೆ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ ಜೀವಂತ ಪಾರಾಗಿದ್ದ ಮೂವರಲ್ಲಿ ಆಗ ಎರಡರ ಹರೆಯದ, ಚಿನ್ನದ ಬಣ್ಣದ ಗುಂಗುರು ಕೂದಲುಗಳ ಮೋಷೆ ಓರ್ವನಾಗಿದ್ದ. 2008,ನ.26ರ ರಾತ್ರಿ ಮುಂಬೈ ದಾಳಿಗಳು ಆರಂಭವಾಗುತ್ತಿದ್ದಂತೆ ಚಾಬಾದ್ ಹೌಸ್‌ಗೆ ನುಗ್ಗಿದ್ದ ಭಯೋತ್ಪಾದಕರ ಗುಂಪು ಒಳಗಿದ್ದವರ ಮೇಲೆ ಗುಂಡುಗಳ ಸುರಿಮಳೆಗೈದಿತ್ತು. ಸ್ಯಾಂಡ್ರಾ ಗುಂಡುಗಳ ಮತ್ತು ಶೆಲ್‌ಗಳ ದಾಳಿಯನ್ನೂ ಲೆಕ್ಕಿಸದೆ ಮೋಷೆಯನ್ನು ಹುಡುಕಲು ಮೇಲಂತಸ್ತಿಗೆ ಧಾವಿಸಿದ್ದಳು. ಅಲ್ಲಿ ತನ್ನ ಹೆತ್ತವರ ಶವಗಳ ಬಳಿ ಕುಳಿತು ಅಳುತ್ತಿದ್ದ ಮಗುವನ್ನೆತ್ತಿಕೊಂಡಿದ್ದ ಆಕೆ ನರಿಮನ್ ಹೌಸ್‌ನ ಅಡುಗೆಯಾಳು ಝಾಕೀರ್ ಖಾಜಿ ಜೊತೆ ಹೊರಗೆ ಧಾವಿಸುವಲ್ಲಿ ಯಶಸ್ವಿಯಾಗಿದ್ದಳು.

ದಾಳಿಗಳ ಕೆಲವು ದಿನಗಳ ಬಳಿಕ ಮುಂಬೈನ ಕಾಲಾಘೋಡಾ ಪ್ರದೇಶದಲ್ಲಿರುವ ಕೆನೆಸೆಥ್ ಎಲಿಯಾಹೂ ಸೈನಾಗಾಗ್‌ನಲ್ಲಿ ನಡೆದಿದ್ದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ತನ್ನ ‘ಇಮ್ಮಾ(ತಾಯಿ)’ಗಾಗಿ ಮೋಷೆ ಅಳುತ್ತಿದ್ದ ದೃಶ್ಯ 26/11 ದಾಳಿಗಳ ನಂತರದ ಅತ್ಯಂತ ಹೃದಯವಿದ್ರಾವಕ ಘಳಿಗೆಗಳಲ್ಲೊಂದಾಗಿತ್ತು. ಚಾಬಾದ್ ಹೌಸ್‌ನ್ನು ನಿರ್ವಹಿಸುತ್ತಿದ್ದ ಹೆತ್ತವರಾದ ರಬ್ಬಿ ಗೇವ್ರಿಯೆಲ್ ಹೋಝ್‌ಬರ್ಗ್ ಮತ್ತು ತಾಯಿ ರಿವಿಕಾ ಭಯೋತ್ಪಾದಕರ ಗುಂಡುಗಳಿಗೆ ಬಲಿಯಾಗಿದ್ದರು. ಮೋಷೆ ಅಕ್ಷರಶಃ ತಬ್ಬಲಿಯಾಗಿದ್ದ.

ದುರಂತದ ಸುದ್ದಿ ತಿಳಿದಾಕ್ಷಣ ಮುಂಬೈಗೆ ಧಾವಿಸಿ ಬಂದಿದ್ದ ರಿವಿಕಾರ ತಂದೆ ಶಿಮೋನ್ ಮತ್ತು ತಾಯಿ ಯೆಹುದಿತ್ ರೋಸೆನ್‌ಬರ್ಗ್ ಅವರು ಮೊಮ್ಮಗನನ್ನು ತಮ್ಮೊಂದಿಗೆ ಕರೆದೊಯ್ದಿದ್ದರು. ಇಬ್ಬರು ಪುತ್ರರ ತಾಯಿಯಾಗಿರುವ ಗೋವಾ ಮೂಲದ ವಿಧವೆ ಸ್ಯಾಂಡ್ರಾ ಕೂಡ ಮೋಷೆಯನ್ನು ನೋಡಿಕೊಳ್ಳಲು ಜೆರುಸಲೇಮ್‌ನಿಂದ 95 ಕಿ.ಮೀ.ಅಂತರದ ಅಫುಲಾದಲ್ಲಿಯ ಶಿಮೋನ್ ಕುಟುಂಬವನ್ನು ಸೇರಿಕೊಂಡಿದ್ದಳು.

ದುರಂತ ನಡೆದ ಬಳಿಕದ ಹತ್ತು ವರ್ಷಗಳಲ್ಲಿ ಕಳೆದ ಜನವರಿಯಲ್ಲ್ಲಿ ಮೋಷೆ ಭಾರತಕ್ಕೆ ಮೊದಲ ಭೇಟಿಯನ್ನು ನೀಡಿದ್ದ. ಈ ಸಂದರ್ಭದಲ್ಲಿ 100 ಇಸ್ರೇಲಿ ಮತ್ತು ಭಾರತೀಯ ಭದ್ರತಾ ಸಿಬ್ಬಂದಿಗಳ ಜೊತೆಗೆ ಮುಂಬೈ ಪೊಲೀಸರೂ ಮೋಷೆಯ ಸುರಕ್ಷತೆಯ ಹೊಣೆಯನ್ನು ಹೊತ್ತುಕೊಂಡಿದ್ದರು. 11ರ ಹರೆಯದ ಮೋಷೆ ಅಜ್ಜ ಶಿಮೋನ್ ಜೊತೆಗೆ ಆಗಮಿಸಿದ್ದು,ತನ್ನ ಹೆತ್ತವರ ಹತ್ಯೆ ನಡೆದಿದ್ದ ನರಿಮನ್ ಹೌಸ್ ಕಟ್ಟಡದ ಚಾಬಾದ್ ಹೌಸ್‌ಗೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ್ದ.

ಸ್ಯಾಂಡ್ರಾಳ ಕಥೆಯೇನು?

ಈಗ 53ರ ಹರೆಯದ ಸ್ಯಾಂಡ್ರಾಗೆ ಇಸ್ರೇಲ್‌ನ ಗೌರವ ಪೌರತ್ವ ದೊರಕಿದೆಯಾದರೂ ಆಕೆ ತನ್ನ ಭಾರತೀಯ ಪಾಸ್‌ಪೋರ್ಟ್‌ನ್ನು ತ್ಯಜಿಸಿಲ್ಲ. ತನ್ನ ಪ್ರೀತಿಯ ಸೋನು(ಮೋಷೆ)ಗೆ ಆರು ವರ್ಷಗಳಾಗುವವರೆಗೂ ಶಿಮೋನ್ ಕುಟುಂಬದ ಜೊತೆಯೇ ವಾಸವಿದ್ದ ಸ್ಯಾಂಡ್ರಾ ನಂತರ ಅಲೆಹ್ ಜೆರುಸಲೇಮ್ ಸೆಂಟರ್‌ನಲ್ಲಿ ಅಂಗವಿಕಲ ಮಕ್ಕಳ ಪೂರ್ಣಕಾಲಿಕ ನ್ಯಾನಿಯಾಗಿ ಸೇವೆ ಸಲ್ಲಿಸುತ್ತಿದ್ಧಾಳೆ. ಆದರೆ ಪ್ರತಿ ಶನಿವಾರ ರಾತ್ರಿ ಅಫುಲಾಕ್ಕೆ ಬಸ್ ಹತ್ತುವ ಸ್ಯಾಂಡ್ರಾ ರವಿವಾರ ಇಡೀ ದಿನ ಮೋಷೆ ಜೊತೆಗೆ ಕಳೆದು ಸೋಮವಾರ ತನ್ನ ಕೆಲಸಕ್ಕೆ ವಾಪಸಾಗುತ್ತಾಳೆ. ಮುಂಬೈ ದಾಳಿಗೆ ಕೇವಲ ಆರು ತಿಂಗಳ ಮೊದಲು ಪತಿಯನ್ನು ಕಳೆದುಕೊಂಡಿದ್ದ ಸ್ಯಾಂಡ್ರಾಳ ಮಕ್ಕಳಾದ ಮಾರ್ಟಿನ್(34)ಮತ್ತು ಜಾಕ್ಸನ್(26) ಭಾರತದಲ್ಲಿದ್ದಾರೆ. ಮೋಷೆ ತನಗೆ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗಿಂತ ಹೆಚ್ಚು ಅನ್ನುತ್ತಾಳೆ ಆಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News