ಐಟಿ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ ನೀಡಲು ಸಿಬಿಐ ಹಂಗಾಮಿ ನಿರ್ದೇಶಕರ ನಿರಾಕರಣೆ

Update: 2018-11-26 18:46 GMT

 ಹೊಸದಿಲ್ಲಿ,ನ.26: ಆದಾಯ ತೆರಿಗೆ ಅಧಿಕಾರಿಗಳು ಮತ್ತು ಓರ್ವ ಮಧ್ಯವರ್ತಿಯ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಪ್ರಕರಣಕ್ಕೆ ಮರುಜೀವ ನೀಡುವಂತೆ ಆಗಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಮೌಖಿಕ ಪ್ರಸ್ತಾವವನ್ನು ಸಿಬಿಐನ ಹಂಗಾಮಿ ನಿರ್ದೇಶಕ ಎಂ.ನಾಗೇಶ್ವರ ರಾವ್ ಅವರು ತಿರಸ್ಕರಿಸಿದ್ದಾರೆ. ಇದೊಂದು ನೀತಿ ನಿರ್ಧಾರವಾಗಿದೆ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಾನಿದನ್ನು ಕೈಗೊಳ್ಳುವಂತಿಲ್ಲ ಎಂದು ಅವರು ಕಾರಣವನ್ನು ನೀಡಿದ್ದಾರೆ.

2016ರಲ್ಲಿ ಸಿಬಿಐ ಒಂಭತ್ತು ಹಿರಿಯ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಚಾರ್ಟರ್ಡ್ ಅಕೌಂಟಂಟ್ ಸಂಜಯ ಭಂಡಾರಿ ಸೇರಿದಂತೆ ಮೂವರು ಖಾಸಗಿ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಈ ಪ್ರಕರಣವು ಸಿಬಿಐ 2015,ಜನವರಿಯಲ್ಲಿ ಭಂಡಾರಿಯೊಂದಿಗೆ ಓರ್ವ ಐಟಿ ಅಧಿಕಾರಿಯ ವಿರುದ್ಧ ದಾಖಲಿಸಿದ್ದ ಪ್ರಕರಣದಿಂದ ಹುಟ್ಟಿಕೊಂಡಿತ್ತು. ಆ ಪ್ರಕರಣದಲ್ಲಿ ಲೆಕ್ಕಪರಿಶೋಧಕ ಸಂಸ್ಥೆ ಎಸ್.ಎಚ್.ಭಂಡಾರಿ ಆ್ಯಂಡ್ ಕಂಪನಿಯ ಶ್ರೇಯಾಂಸ್ ಭಂಡಾರಿಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಐಟಿ ಅಧಿಕಾರಿಯನ್ನು ಬಂಧಿಸಲಾಗಿತ್ತು.

2018,ಮಾರ್ಚ್ 13ರಂದು ಆಗಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾರ ಸೂಚನೆಗಳ ಮೇರೆಗೆ ಪ್ರಕರಣವನ್ನು ಸಮಾಪ್ತಿಗೊಳಿಸಲಾಗಿತ್ತು ಮತ್ತು ಇದನ್ನು ಹೆಚ್ಚುವರಿ ನಿರ್ದೇಶಕ(ಪ್ರಭಾರ) ಪ್ರವೀಣ ಸಿನ್ಹಾ ಅವರು ಪ್ರಕರಣದ ಕಡತದಲ್ಲಿ ದಾಖಲಿಸಿದ್ದರು.

ಬಳಿಕ ಸಿಬಿಐ ಕಟ್ಟಡವನ್ನು ಉದ್ಘಾಟಿಸಲು ಮದುರೈಗೆ ಭೇಟಿ ನೀಡಿದ್ದ ಸಂದರ್ಭ ವರ್ಮಾ ಅವರು ಪ್ರಕರಣಕ್ಕೆ ಮರುಜೀವ ನೀಡುವಂತೆ ವೌಖಿಕವಾಗಿ ಸೂಚಿಸಿದ್ದರು. ಚೆನ್ನೈ ಸಿಬಿಐ ಘಟಕವು ಈಗ ಈ ಸಂಬಂಧ ಆದೇಶವನ್ನು ಕೋರಿತ್ತು.

 ಸಿಬಿಐನ ಆಂತರಿಕ ಕಚ್ಚಾಟದ ಹಿನ್ನೆಲೆಯಲ್ಲಿ ವಿಶೇಷ ನಿರ್ದೇಶಕ ರಾಕೇಶ ಅಸ್ತಾನಾರೊಂದಿಗೆ ಕಡ್ಡಾಯ ರಜೆಯಲ್ಲಿ ಕಳುಹಿಸಲ್ಪಟ್ಟಿರುವ ವರ್ಮಾ ಅವರ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಅ.2ರಂದು ನಡೆಸಿದ್ದ ಸಂದರ್ಭ ವರ್ಮಾ ಅವರ ಕೆಲಸಗಳನ್ನು ನೋಡಿಕೊಳ್ಳಲು ಹಂಗಾಮಿ ನಿರ್ದೇಶಕರಾಗಿ ನೇಮಕಗೊಂಡಿದ್ದ ಐಪಿಎಸ್ ಅಧಿಕಾರಿ ರಾವ್ ಅವರು ಯಾವುದೇ ನೀತಿ ನಿರ್ಧಾರ ಅಥವಾ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವುದನ್ನು ು ನಿಷೇಧಿಸಿತ್ತು.

ವರ್ಮಾ ಅವರ ಪ್ರಸ್ತಾಕ್ಕೆ ಒಪ್ಪಿಗೆ ನೀಡುವುದು ನೀತಿ ನಿರ್ಧಾರಕ್ಕೆ ಸಮನಾಗುತ್ತದೆ ಮತ್ತು ಇದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶಕ್ಕೆ ವಿರುದ್ಧವಾಗುತ್ತದೆ. ಆದ್ದರಿಂದ ಪ್ರಕರಣಕ್ಕೆ ಮರುಜೀವ ನೀಡುವಂತೆ ಕೋರಿಕೆಯನ್ನು ರಾವ್ ತಿರಸ್ಕರಿಸಿದ್ದಾರೆ ಎಂದು ಸಿಬಿಐ ವಕ್ತಾರರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News