ನೋಟು ನಿಷೇಧ ಆರ್ಥಿಕತೆಯಲ್ಲಿ ಅಸ್ಥಿರತೆ ಉಂಟು ಮಾಡಿದೆ: ಊರ್ಜಿತ್ ಪಟೇಲ್

Update: 2018-11-27 16:29 GMT

ಹೊಸದಿಲ್ಲಿ, ನ. 27: ನೋಟು ನಿಷೇಧ, ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿನ ಅನುತ್ಪಾದಕ ಆಸ್ತಿಗಳ ಪರಿಸ್ಥಿತಿ ಹಾಗೂ ಇತರ ವಿಷಯಗಳ ಬಗ್ಗೆ ವಿವರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಊರ್ಜಿತ್ ಪಟೇಲ್ ಮಂಗಳವಾರ ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದಾರೆ.

ಕೆಲವು ವಿವಾದಾತ್ಮಕ ವಿಷಯಗಳ ಬಗ್ಗೆ ಲಿಖಿತ ಉತ್ತರವನ್ನು ಸಲ್ಲಿಸಲು ತಾನು ಸಮಿತಿಗೆ ಬದ್ಧನಾಗಿದ್ದೇನೆ ಎಂದು ಪಟೇಲ್ ಹೇಳಿದರು.

ಹಣಕಾಸಿಗಿರುವ 31 ಸದಸ್ಯರ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹಾಜರಾದ ಪಟೇಲ್, ತೈಲ ಬೆಲೆ ಕಳೆದ ನಾಲ್ಕು ವರ್ಷಗಳಿಂದ ತೀವ್ರ ಏರಿಕೆ ಕಂಡಿದ್ದು, ಈಗ ಇಳಿಕೆಯಾಗುತ್ತಿರುವುದಿಂದ ಆರ್ಥಿಕತೆ ವರ್ಧಿಸುತ್ತಿದೆ ಹಾಗೂ ಆರ್ಥಿಕತೆಯ ತಳಪಾಯ ಗಟ್ಟಿಯಾಗಿದೆ ಎಂದರು.

ನೋಟು ನಿಷೇಧದ ವಿವರಗಳನ್ನು ಹಂಚಿಕೊಂಡು ಸಂಸತ್ ಸದಸ್ಯರಿಗೆ ಮಾಹಿತಿ ನೀಡಿದ ಅವರು, ಸಾಲದ ಬೆಳವಣಿಗೆ ಶೇ. 15 ಏರಿಕೆಯಾಗಿತ್ತು ಹಾಗೂ 2016 ನವೆಂಬರ್‌ನ ನೋಟು ನಿಷೇಧ ಆರ್ಥಿಕತೆಯಲ್ಲಿ ಅಸ್ಥಿರತೆ ಉಂಟು ಮಾಡಿದೆ ಎಂದರು.

ಈ ಹಿಂದೆ ಪಟೇಲ್ ಅವರು ನವೆಂಬರ್ 12ರಂದು ಸಮಿತಿ ಮುಂದು ಹಾಜರಾಗಲು ನಿರ್ಧರಿಸಲಾಗಿತ್ತು.

ಸರಕಾರ ಆರ್‌ಬಿಐ ಕಾಯ್ದೆಯಲ್ಲಿ ಕಲಂ 7 ಜಾರಿಗೊಳಿಸುವುದು, ಅನುತ್ಪಾದಕ ಅಸ್ತಿಗಳು, ಕೇಂದ್ರ ಬ್ಯಾಂಕ್‌ಗಳ ಸ್ವಾಯತ್ತತೆ ಸಹಿತ ಹಲವು ವಿವಾದಾತ್ಮಕ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪಟೇಲ್ ಉತ್ತರ ನೀಡಲಿಲ್ಲ.

ಪಟೇಲ್ ಸಮಿತಿಗೆ ದೇಶದ ಆರ್ಥಿಕತೆ ಹಾಗೂ ಜಗತ್ತಿನ ಆರ್ಥಿಕತೆ ಬಗ್ಗೆ ವಿವರಣೆ ನೀಡಿದರು. ಈ ಬಗ್ಗೆ ಹಲವು ಸದಸ್ಯರು ಪ್ರಶ್ನೆಗಳನ್ನು ಎತ್ತಿದರು. ಆರ್ಥಿಕತೆಯ ಕುರಿತು ಅವರ ನಿಲುವು ಆಶಾವಾದದಿಂದ ಕೂಡಿತ್ತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News