26/11 ಉಗ್ರರ ದಾಳಿ ಪ್ರಕರಣದಲ್ಲಿ ಪಾಕ್‌ನಿಂದ ದ್ವಂದ್ವ ನೀತಿ: ಭಾರತ

Update: 2018-11-27 17:38 GMT

ಹೊಸದಿಲ್ಲಿ, ನ.27: 10 ವರ್ಷದ ಹಿಂದೆ ಮುಂಬೈಯಲ್ಲಿ ನಡೆದ ಭಯೋತ್ಪಾದಕರ ದಾಳಿ(26/11) ಪ್ರಕರಣದಲ್ಲಿ ಪಾಕಿಸ್ತಾನ ದ್ವಂದ್ವ ನೀತಿ ಕೈಬಿಟ್ಟು ಅಪರಾಧಿಗಳನ್ನು ನ್ಯಾಯಾಲಯದ ಕಟಕಟೆಗೆ ಒಪ್ಪಿಸಲು ಸಹಕರಿಸಬೇಕು ಎಂದು ಭಾರತ ಆಗ್ರಹಿಸಿದೆ.

26/11 ದಾಳಿಯ ಸೂತ್ರಧಾರರು ಈಗಲೂ ಪಾಕಿಸ್ತಾನದ ರಸ್ತೆಗಳಲ್ಲಿ ಆರಾಮವಾಗಿ ಓಡಾಡುತ್ತಿದ್ದಾರೆ. ಈ ದಾಳಿಯನ್ನು ಪಾಕಿಸ್ತಾನದ ಪ್ರದೇಶದಲ್ಲಿ ಯೋಜಿಸಿ ಕಾರ್ಯಗತಗೊಳಿಸಲಾಗಿದೆ. ಆದ್ದರಿಂದ ದಾಳಿಯ ಸಂಚುಕೋರರ ವಿರುದ್ಧ ಕಾನೂನು ಕ್ರಮ ನಡೆಸಲು ಸಹಕರಿಸುವಂತೆ ಪಾಕಿಸ್ತಾನವನ್ನು ಮತ್ತೊಮ್ಮೆ ವಿನಂತಿಸುತ್ತೇವೆ ಎಂದು ವಿದೇಶ ವ್ಯವಹಾರ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

2008ರ ನವೆಂಬರ್ 26ರಂದು ಪಾಕ್‌ನಿಂದ ಬಂದಿದ್ದ 10 ಉಗ್ರರು ಮುಂಬೈ ಮೇಲೆ ದಾಳಿ ನಡೆಸಿ ಅಮೆರಿಕನ್ನರೂ ಸಹಿತ 166 ಮಂದಿಯನ್ನು ಕೊಂದಿದ್ದರು. ಘಟನೆಯಲ್ಲಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘೋರ ಕೃತ್ಯ ನಡೆದು 10 ವರ್ಷ ಸಂದಿದ್ದು, ಸಂತ್ರಸ್ತರು ಇನ್ನೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ ಪಾಕಿಸ್ತಾನ ಅಪರಾಧಿಗಳನ್ನು ನ್ಯಾಯಾಂಗದ ವಶಕ್ಕೆ ನೀಡಲು ಇನ್ನೂ ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ದಾಳಿಯ ಪ್ರಧಾನ ಸೂತ್ರಧಾರ, ನಿಷೇಧಿತ ಜಮಾತ್-ಉದ್ ದಾವ ಮುಖ್ಯಸ್ಥ ಹಫೀಝ್ ಸಯೀದ್‌ನ ಬಗ್ಗೆ ಮಾಹಿತಿ ನೀಡಿದರೆ 70 ಕೋಟಿ ರೂ. ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News