×
Ad

ರೈಲಿನಲ್ಲಿ 50 ಮಾನವ ಅಸ್ಥಿಪಂಜರ ಸಾಗಾಟ: ಆರೋಪಿಯ ಬಂಧನ

Update: 2018-11-28 15:41 IST

ಪಾಟ್ನಾ, ನ.28: ರೈಲಿನಲ್ಲಿ ಸಾಗಿಸಲಾಗುತ್ತಿದ್ದ 50 ಮಾನವ ಅಸ್ಥಿಪಂಜರಗಳನ್ನು ಬಿಹಾರದ ಸರನ್ ಜಿಲ್ಲೆಯ ಛಾಪ್ರ ರೈಲ್ವೆ ನಿಲ್ದಾಣದಲ್ಲಿ ಸರಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ಮಂಗಳವಾರ ವಶ ಪಡಿಸಿಕೊಂಡು ಶಂಕಿತ ಶವ ಕಳ್ಳಸಾಗಣಿಕೆದಾರನೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಸಂಜಯ್ ಪ್ರಸಾದ್ ಎಂದು ಗುರುತಿಸಲಾಗಿದ್ದು ಆತ ಬಲಿಯಾ-ಸಿಯಲ್ದಾಹ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ.  ಉತ್ತರ ಪ್ರದೇಶದ ಬಲಿಯಾ ಎಂಬಲ್ಲಿಂದ ಆತ ಈ ಅಸ್ಥಿಪಂಜರಗಳನ್ನು ಸಾಗಿಸುತ್ತಿದ್ದನೆನ್ನಲಾಗಿದ್ದು, ಭೂತಾನ್ ಮೂಲಕ ಚೀನಾಗೆ ಸಾಗಿಸುವ ಉದ್ದೇಶ ಆರೋಪಿಗಿತ್ತು ಎನ್ನಲಾಗಿದೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಆತನ ಮೊಬೈಲ್ ಫೋನಿನಲ್ಲಿರುವ ಫೋನ್ ಸಂಖ್ಯೆಗಳನ್ನು ಪರಾಮರ್ಶಿಸಲಾಗುತ್ತಿದೆ. ಆರೋಪಿಯಿಂದ ನೇಪಾಳ ಮತ್ತು ಭೂತಾನ್ ದೇಶಗಳ ಕರೆನ್ಸಿ ನೋಟುಗಳು, ಎಟಿಎಂ ಕಾರ್ಡುಗಳು, ಎರಡು ಗುರುತಿನ ಚೀತಿ, ಹಾಗೂ ನೇಪಾಳದ ಮೊಬೈಲ್ ಸಂಖ್ಯೆಗಳಿರುವ  ಸಿಮ್ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆತನ ಬಳಿಯಿದ್ದ ಒಂದು ಗುರುತಿನ ಚೀಟಿಯಲ್ಲಿ  ಪಶ್ಚಿಮ ಚಂಪಾರನ್ ಎಬಲ್ಲಿನ ಪಹಾರ್ಪುರ್ ವಿಳಾಸವಿದ್ದರೆ ಇನ್ನೊಂದು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ವಿಳಾಸ ಹೊಂದಿದೆ. ವೈದ್ಯಕೀಯ ವಿದ್ಯಾರ್ಥಿಗಳಿಂದ ಅಸ್ಥಿಪಂಜರಗಳಿಗೆ ಬಹಳಷ್ಟು ಬೇಡಿಕೆಯಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ.

 2009ರಲ್ಲಿ ಸರನ್ ಪೊಲೀಸರು  ಬಸ್ಸಿನಲ್ಲಿ ಸಾಗಾಟವಾಗುತ್ತಿದ್ದ 67 ಮಾನವ ತಲೆಬುರುಡೆಗಳನ್ನು ವಶಪಡಿಸಿಕೊಂಡು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರು. ಇದಕ್ಕೂ ಮುಂಚೆ, ಎಪ್ರಿಲ್ 2004ರಲ್ಲಿ 1,000 ಮಾನವ ತಲೆಬುರುಡೆಗಳು ಹಾಗೂ ದೇಹದ ಇತರ ಭಾಗಗಳು ಗಯಾದ ನದಿ ಸಮೀಪ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News