×
Ad

ಇಂಗ್ಲೆಂಡ್ ನಲ್ಲಿ ಸಿರಿಯನ್ ನಿರಾಶ್ರಿತ ಬಾಲಕನಿಗೆ ಹಲ್ಲೆ: ವಿಡಿಯೋ ವೈರಲ್

Update: 2018-11-28 16:34 IST

ಲಂಡನ್, ನ.28: ಸಿರಿಯನ್ ನಿರಾಶ್ರಿತ ಬಾಲಕನೊಬ್ಬನ ಮೇಲೆ ಬಿಳಿಯ ವಿದ್ಯಾರ್ಥಿಯೊಬ್ಬ ಪಶ್ಚಿಮ ಯಾರ್ಕ್ ಶೈರ್‍ ನ ಹಡ್ಡರ್ಸ್ ಫೀಲ್ಡ್ ಎಂಬಲ್ಲಿನ ಆಲ್ಮಂಡ್‍ ಬರಿ ಕಮ್ಯುನಿಟಿ ಶಾಲೆಯಲ್ಲಿ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆಯಿಂದ ವಿಚಲಿತರಾಗಿರುವ ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಟ್ವೀಟ್ ಮಾಡಿ ಘಟನೆಯನ್ನು ಬಲವಾಗಿ ಖಂಡಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

“ಇದು ತೀರಾ ಅಸಹ್ಯಕರ. ಏನಾದರೂ ತುರ್ತು ಕ್ರಮ ಕೈಗೊಳ್ಳಲಿ. ಮನೆಯಿಂದ ದೂರವಿರುವ ಬಾಲಕ ಬಾಲಕಿಯರಿಗೆ ಶಾಲೆಗಳು ಸುರಕ್ಷಿತವಾಗಿರಬೇಕು'' ಎಂದು ಶೇನ್ ವಾರ್ನ್ ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳು ನಡೆದ ಈ ಘಟನೆ  ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.  ಶಾಲಾ ಮೈದಾನದಲ್ಲಿ ಸಿರಿಯನ್ ನಿರಾಶ್ರಿತನೆಂದು ತಿಳಿಯಲಾದ ಬಾಲಕನನ್ನು ನೆಲಕ್ಕೆ ಬೀಳಿಸಿ ಆತನ ತಲೆಗೆ ಹೊಡೆಯುತ್ತಿರುವ ದೃಶ್ಯವಿದೆ. ಆರೋಪಿ ಬಾಲಕನ ಸ್ನೇಹಿತ ಈ ವೀಡಿಯೋ ರೆಕಾರ್ಡ್ ಮಾಡಿದ್ದನೆನ್ನಲಾಗಿದೆ. ಜಮಾಲ್ ಎಂಬಾತನನ್ನು ಕೂಗಿ ಕರೆದು ನಂತರ ಆತನ ಮೇಲೆ ದಾಳಿ ನಡೆಸಲಾಗಿದೆ.

ನಂತರ ಆ ಬಾಲಕ ಸಂತ್ರಸ್ತನ ಬಾಯಿಗೆ ಬಾಟಲಿಯಿಂದ ನೀರು ಸುರಿದು ನಿನ್ನನ್ನು ಮುಳುಗಿಸುತ್ತೇನೆ ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಸಂತ್ರಸ್ತ ಬಾಲಕನ ಕೈಗೆ ಮೂಳೆ ಮುರಿತಕ್ಕೊಳಗಾದವರಿಗೆ ಹಾಕಲಾಗುವಂತಹ ಬ್ಯಾಂಡೇಜ್ ಹಾಕಲಾಗಿರುವುದೂ ವೀಡಿಯೋದಲ್ಲಿ ಕಾಣಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News