ಸತ್ಯಪಾಲ್ ಮಲಿಕ್ ಹೇಳಿಕೆಯಿಂದ ಕಾಶ್ಮೀರದಲ್ಲಿ ಬಿಜೆಪಿಯ ಕುಟಿಲ ರಾಜಕೀಯ ಬಯಲು: ಸಿಪಿಎಂ

Update: 2018-11-28 16:38 GMT
ಸತ್ಯಪಾಲ್ ಮಲಿಕ್

ಜಮ್ಮು, ನ.28: ಜಮ್ಮುಕಾಶ್ಮೀರದಲ್ಲಿ ಸರಕಾರ ರಚನೆಯ ಕುರಿತು ರಾಜ್ಯಪಾಲ ಸತ್ಯಪಾಲ್ ಮಲಿಕ್ ವ್ಯಕ್ತಪಡಿಸಿರುವ ಅಭಿಪ್ರಾಯವು, ರಾಜ್ಯದಲ್ಲಿ ಬಿಜೆಪಿಯು ಕುಟಿಲೋಪಾಯದಿಂದ ತನ್ನ ಸರಕಾರವನ್ನು ಹೇರಲು ಪ್ರಯತ್ನಿ ಸುತ್ತಿದೆಯೆಂಬ ಜನತೆಯ ಭೀತಿಯನ್ನು ದೃಢಪಡಿಸಿದೆಯೆಂದು ಸಿಪಿಎಂ ಮಂಗಳವಾರ ತಿಳಿಸಿದೆ.

ವಿಧಾನಸಭೆಯನ್ನು ವಿಸರ್ಜನೆಗೆ ಮುನ್ನ ಸಜ್ಜಾದ್ ಲೋನ್, ದಿಲ್ಲಿಯ ಅಭಿಪ್ರಾಯವನ್ನು ಕೋರುತ್ತಿದ್ದಲ್ಲಿ ಅವರು ರಾಜ್ಯದ ಮುಖ್ಯಮಂತ್ರಿ ಯಾಗುತ್ತಿದ್ದರು ಎಂದು ಜಮ್ಮುಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಗ್ವಾಲಿಯರ್‌ನಲ್ಲಿ ಹೇಳಿಕೆ ನೀಡಿರುವುದು, ಬಿಜೆಪಿಯು ಕುಟಿಲಮಾರ್ಗದಿಂದ ತನ್ನ ಸರಕಾರವನ್ನು ಹೇರಲು ಹತಾಶ ಪ್ರಯತ್ನ ನಡೆಸುತ್ತಿರುವ ಬಗ್ಗೆ ಜನತೆಯಲ್ಲಿ ಮೂಡಿರುವ ಭೀತಿಯನ್ನು ದೃಢಪಡಿಸಿದೆ’’ ಎಂದು ಜಮ್ಮುಕಾಶ್ಮೀರ ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.

ವಿಧಾನಸಭೆಯನ್ನು ಅಮಾನತಿಲ್ಲಿರಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಉದ್ದೇಶವು ಸ್ಪಷ್ಟವಾಗಿಲ್ಲವೆಂದು ಸಿಪಿಎಂ ಮೊದಲ ದಿನದಿಂದಲೇ ಹೇಳುತ್ತಲೇ ಬಂದಿದೆ. ಇದೀಗ ಸತ್ಯಪಾಲ್ ಮಲಿಕ್ ಅವರ ಹೇಳಿಕೆಯು ಈ ಗುಟ್ಟನ್ನು ಬಯಲಿಗೆಳೆದಿದೆದೆಯೆಂದು ಹೇಳಿಕೆಯು ತಿಳಿಸಿದೆ.

ರಾಜ್ಯದಲ್ಲಿ ಪಕ್ಷಾಂತರಗಳನ್ನು ಹಾಗೂ ಕುದುರೆವ್ಯಾಪಾರವನ್ನು ಪ್ರೋತ್ಸಾಹಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದೀಗ ಕೇಂದ್ರದ ಪ್ರತಿನಿಧಿಯಾಗಿರುವ ರಾಜ್ಯಪಾಲರು ತಾವಾಗಿಯೇ ಗುಟ್ಟನ್ನು ರಟ್ಟು ಮಾಡಿದ್ದಾರೆಂದು ಅದು ಹೇಳಿದೆ.

ಅಪ್ರಾಮಾಣಿಕ ವ್ಯಕ್ತಿಯೆಂಬುದಾಗಿ ಇತಿಹಾಸದಲ್ಲಿ ತನ್ನ ಹೆಸರು ಸೇರಿಹೋಗಬಾರದೆಂಬ ಕಾರಣಕ್ಕಾಗಿ ತಾನು ಜಮ್ಮುಕಾಶ್ಮೀರ ವಿಧಾನಸಭೆ ಯನ್ನು ವಿಸರ್ಜಿಸಿರುವುದಾಗಿ ರಾಜ್ಯಪಾಲರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಪ್ರತಿಪಕ್ಷ ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್‌ನ ಬೆಂಬಲದೊಂದಿಗೆ ಪಿಡಿಪಿ ಪಕ್ಷವು ಜಮ್ಮುಕಾಶ್ಮೀರದಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಿದ ಬೆನ್ನಲ್ಲೇ ಮಲಿಕ್ ಅವರು ದಿಢೀರನೆ ವಿಧಾನಸಭೆಯನ್ನು ವಿಸರ್ಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News