ಅಸ್ತಾನಾರಿಗೆ ಸಂಬಂಧಿಸಿದ ಪ್ರಕರಣದ ದಾಖಲೆ ಪರಿಶೀಲನೆ: ಅಲೋಕ್ ವರ್ಮಾಗೆ ಅವಕಾಶ ನೀಡಿದ ಹೈಕೋರ್ಟ್

Update: 2018-11-28 17:41 GMT

ಹೊಸದಿಲ್ಲಿ, ನ.28: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಪರಿಶೀಲಿಸಲು ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಹಾಗೂ ಜಂಟಿ ನಿರ್ದೇಶಕ ಎ.ಕೆ.ಶರ್ಮಗೆ ದಿಲ್ಲಿಯ ಹೈಕೋರ್ಟ್ ಅವಕಾಶ ನೀಡಿದೆ.

ಅಸ್ತಾನಾ ಸಲ್ಲಿಸಿರುವ ಅರ್ಜಿಯಲ್ಲಿ ವರ್ಮ ವಿರುದ್ಧ ದುರುದ್ದೇಶದ ಹೇಳಿಕೆ ಇರುವುದಾಗಿ ವರ್ಮರ ವಕೀಲರು ನ್ಯಾಯಾಲಯದಲ್ಲಿ ಹೇಳಿದಾಗ, ಗುರುವಾರ ಕೇಂದ್ರ ಜಾಗೃತ ಆಯೋಗ(ಸಿವಿಸಿ)ದ ಕಚೇರಿಗೆ ತೆರಳಿ ಅಸ್ತಾನಾರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವಂತೆ ಹೈಕೋರ್ಟ್ ತಿಳಿಸಿತು. ಅದೇ ರೀತಿ, ಶುಕ್ರವಾರ ಸಿವಿಸಿ ಕಚೇರಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸುವಂತೆ ಎ.ಕೆ.ಶರ್ಮಗೆ ತಿಳಿಸಿತು.

ಇದೇ ಸಂದರ್ಭ, ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಅಸ್ತಾನಾ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ, ಅಸ್ತಾನಾ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಡಿ.7ರವರೆಗೆ ಹೈಕೋರ್ಟ್ ಮುಂದೂಡಿದ್ದು ಅದುವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸಿಬಿಐಗೆ ಸೂಚಿಸಿದೆ. ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಅಸ್ತಾನಾ, ಅಲೋಕ್ ಕುಮಾರ್ ವರ್ಮ ಹಾಗೂ ಮಧ್ಯವರ್ತಿ ಮನೋಜ್ ಪ್ರಸಾದ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News