ರಾಜ್ಯ ಮರೆತ ಪ್ರಚಾರ ನಿರತ ಸಿಎಂ ಯಾರು ಗೊತ್ತೇ ?

Update: 2018-11-29 04:27 GMT

ಲಕ್ನೋ, ನ. 29: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಕಳೆದ ಒಂದು ತಿಂಗಳಲ್ಲಿ 20 ದಿನಗಳ ಕಾಲ ರಾಜ್ಯದಿಂದ ಹೊರಗಿದ್ದು ಬೇರೆ ರಾಜ್ಯಗಳ ಚುನಾವಣಾ ಪ್ರಚಾರದಲ್ಲೇ ತಲ್ಲೀನರಾಗಿ ರಾಜ್ಯದ ಆಡಳಿತ ಮರೆತಂತಿದೆ.

ಮುಖ್ಯಮಂತ್ರಿಯ ಪ್ರಚೋದನಕಾರಿ ಹಿಂದುತ್ವ ಸಿದ್ಧಾಂತ, ರಾಜಕೀಯ ನಾವಿನ್ಯದ ಮೌಲ್ಯ ಮತ್ತು ಸಮೂಹ ಸೆಳೆಯುವ ಆಕರ್ಷಣೀಯ ವ್ಯಕ್ತಿತ್ವದಲ್ಲಿ ಮೋದಿ ನಂತರ ಬಿಜೆಪಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಟಾರ್ ಪ್ರಚಾರಕರಾಗಿ ಗಮನ ಸೆಳೆದಿದ್ದಾರೆ.

ಈ ವಿವಾದಾಸ್ಪದ ಅರ್ಚಕ- ರಾಜಕಾರಣಿ ಈ ಅವಧಿಯಲ್ಲಿ ಮೂರು ರಾಜ್ಯಗಳಲ್ಲಿ 26 ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದಾರೆ. ಛತ್ತೀಸ್‌ಗಢದಲ್ಲಿ ಆರು, ಮಧ್ಯಪ್ರದೇಶದಲ್ಲಿ ಒಂಬತ್ತು ಹಾಗೂ ರಾಜಸ್ಥಾನದಲ್ಲಿ 11 ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂರು ರಾಜ್ಯದಲ್ಲಿ ಡಿಸೆಂಬರ್ 1ರಂದು ಪ್ರಚಾರ ಕಾರ್ಯ ಮುಗಿಸಲಿರುವ ಆದಿತ್ಯನಾಥ್ ಬಳಿಕ ತೆಲಂಗಾಣಕ್ಕೆ ತೆರಳುವರು.

ಹಿಂದೂಗಳ ಭಾವನೆ ಕೆರಳಿಸಲು ಫೈರ್‌ಬ್ರಾಂಡ್ ಹಿಂದುತ್ವ ನಾಯಕ ಬೇಕು ಎಂಬ ಬಿಜೆಪಿ ನಾಯಕತ್ವದ ನಿರೀಕ್ಷೆಯನ್ನು ಆದಿತ್ಯನಾಥ್ ಹುಸಿಗೊಳಿಸಿಲ್ಲ. ಎರಡು ದಿನಗಳ ಹಿಂದೆ ಮಧ್ಯಪ್ರದೇಶ ಪ್ರಚಾರಸಭೆಯಲ್ಲಿ ಮಾತನಾಡಿದ ಆದಿತ್ಯನಾಥ್, "ಶೇಕಡ 90ರಷ್ಟು ಮುಸ್ಲಿಮರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕಮಲನಾಥ್ ಹೇಳಿದ್ದಾರೆ. ಕಾಂಗ್ರೆಸ್‌ಗೆ ಮುಸ್ಲಿಮರ ಮತವಷ್ಟೇ ಸಾಕು; ಕಮಲ್‌ನಾಥ್‌ಜಿ ನಿಮ್ಮ ಅಲಿಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ; ನಮಗೆ ಬಜರಂಗಬಲಿ ಸಾಕು" ಎಂದು ಚುಚ್ಚಿದ್ದರು.

ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಅನುಪಸ್ಥಿತಿ ವ್ಯಾಪಕ ಟೀಕೆಗೆ ಕಾರಣವಾಗಿದೆ. "ಆದಿತ್ಯನಾಥ್ ಅನುಪಸ್ಥಿತಿಯಲ್ಲಿ ಉತ್ತರ ಪ್ರದೇಶ ಸರ್ಕಾರಿ ಯಂತ್ರ ಕುಸಿದುಬಿದ್ದಿದೆ. ಇದು ರಾಮರಾಜ್ಯದ ಉದಾಹರಣೆಯೇ" ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News