ಉನಾದಲ್ಲಿ ದಲಿತ ವ್ಯಕ್ತಿಯ ಸಜೀವ ದಹನ ಪ್ರಕರಣ: 11 ಜನರಿಗೆ ಜೀವಾವಧಿ ಶಿಕ್ಷೆ

Update: 2018-11-29 13:59 GMT

ಹೊಸದಿಲ್ಲಿ,ನ.29: 2012ರಲ್ಲಿ ಗುಜರಾತಿನ ಗಿರ್ ಸೋಮನಾಥ ಜಿಲ್ಲೆಯ ಉನಾ ತಾಲೂಕಿನ ಅಂಕೋಲಾಲಿ ಗ್ರಾಮದಲ್ಲಿ ದಲಿತ ವ್ಯಕ್ತಿಯನ್ನು ಸಜೀವ ದಹನಗೊಳಿಸಿದ್ದ ಎಲ್ಲ 11 ಜನರನ್ನು ತಪ್ಪಿತಸ್ಥರು ಎಂದು ಗುರುವಾರ ಘೋಷಿಸಿದ ಉನಾದ ನಿಯೋಜಿತ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ತಮ್ಮ ಸಮುದಾಯದ ಯುವತಿಯೋರ್ವಳು ಪರಾರಿಯಾಗಲು ಕಾರಣನಾಗಿದ್ದ ಎಂದು ಆರೋಪಿಸಿ ಮೇಲ್ಜಾತಿಯ ಗುಂಪೊಂದು ದಲಿತ ವ್ಯಕ್ತಿಯ ಮೇಲೆ ದಾಳಿ ನಡೆಸಿತ್ತು.

ಗುಂಪು ದಲಿತ ವ್ಯಕ್ತಿಯ ಮನೆಗೆ ಬೆಂಕಿ ಹಚ್ಚಿದ ಬಳಿಕ ಆತನ ಕುಟುಂಬದವರು ಗ್ರಾಮದಿಂದ ಪರಾರಿಯಾಗಿದ್ದರು ಮತ್ತು ಬಳಿಕ ರಾಜ್ಯ ಸರಕಾರವು ಅವರನ್ನು ನಿರ್ವಸಿತರು ಎಂದು ಘೋಷಿಸಿತ್ತು.

 ಮೂರು ವರ್ಷಗಳ ಹಿಂದೆಯೇ ರಾಜ್ಯ ಸರಕಾರವು ತಮ್ಮನ್ನು ನಿರ್ವಸಿತರು ಎಂದು ಘೋಷಿಸಿದ್ದರೂ ತಮಗೆ ಪುನರ್ವಸತಿ ಕಲ್ಪಿಸುವಲ್ಲಿ ವಿಫಲಗೊಂಡಿರುವುದರಿಂದ ತಮಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ಈ ಕುಟುಂಬವು ಕಳೆದ ತಿಂಗಳು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರಗಳನ್ನು ಬರೆದಿತ್ತು.

 ಪರಿಹಾರಕ್ಕಾಗಿ ತಾವು ಪದೇಪದೇ ಸರಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದರೂ ಅವುಗಳನ್ನು ಕಡೆಗಣಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದ 14 ಸದಸ್ಯರ ಈ ಕುಟುಂಬವು,ನಾಲ್ಕು ವಸತಿ ನಿವೇಶನಗಳ ಹಂಚಿಕೆ,ಮನೆಗಳು ಮತ್ತು ಶೌಚಾಲಯಗಳ ನಿರ್ಮಾಣಕ್ಕೆ, ತಮ್ಮ ಭೂಮಿಯನ್ನು ಕೃಷಿಯೋಗ್ಯವಾಗಿಸಲು ಮತ್ತು ಜೀವನನೋಪಾಯಕ್ಕಾಗಿ ಅಂಗಡಿಗಳನ್ನು ತೆರೆಯಲು ಆರ್ಥಿಕ ನೆರವು,ತಮ್ಮ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಪ್ರವೇಶ,ವಿದ್ಯುತ್ ಮತ್ತು ನೀರಿನ ಸಂಪರ್ಕ ಹಾಗೂ ಹೆಚ್ಚುವರಿ ಕೃಷಿಭೂಮಿ ಮಂಜೂರು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿತ್ತು.

2012,ಸೆ.13ರಂದು ಮೇಲ್ಜಾತಿಯ ಗುಂಪು ತಮ್ಮ ಮನೆಗೆ ಬೆಂಕಿ ಹಚ್ಚಿದ ಬಳಿಕ ಪಿಯೂಷ್ ಸರ್ವೈಯಾ(29) ಮತ್ತು ಆತನ ಹೆತ್ತವರು,ಮೂವರು ಸೋದರರು,ಅವರ ಪತ್ನಿಯರು ಮತ್ತು ಮಕ್ಕಳು ಸೇರಿದಂತೆ ಕುಟುಂಬದ 14 ಜನರು ಅಂಕೋಲಾಲಿ ಗ್ರಾಮವನ್ನು ತೊರೆದಿದ್ದರು. ತಮ್ಮ ಜಾತಿಯ ಯುವತಿಯ ಪರಾರಿಗೆ ದಲಿತರು ಸಹಕರಿಸಿದ್ದಾರೆಂದು ಆರೋಪಿಸಿದ್ದ ಗುಂಪು ಸರ್ವೈಯಾನ ಹಿರಿಯ ಸಹೋದರ ಲಾಲ್ಜಿಯನ್ನು ಸಜೀವ ದಹನಗೊಳಿಸಿತ್ತು.

ಅಂಕೋಲಾಲಿ ತೊರೆದ ಬಳಿಕ ಈ ಗುಂಪು ಉನಾ ತಾಲೂಕಿನ ದೆಲ್ವಾಡಾದಲ್ಲಿ ವಾಸವಿದೆ. 2015ರಲ್ಲಿ ಅವರನ್ನು ನಿರ್ವಸಿತರು ಎಂದು ಘೋಷಿಸಿದ್ದ ರಾಜ್ಯ ಸರಕಾರವು ಕುಟುಂಬಕ್ಕೆ ಎರಡು ವಸತಿ ನಿವೇಶನಗಳು ಮತ್ತು 5.33 ಎಕರೆ ಕೃಷಿಭೂಮಿಯನ್ನು ಮಂಜೂರು ಮಾಡಿತ್ತು.

ಆದರೆ ತಮಗೆ ನಿವೇಶನಗಳನ್ನು ಹಂಚಿಕೆ ಮಾಡಿರುವ ಪ್ರದೇಶದಲ್ಲಿ ವಿದ್ಯುತ್ ಮತ್ತು ನೀರಿನ ಸಂಪರ್ಕವಿಲ್ಲ. ತಾವು ಕೃಷಿಭೂಮಿಯಲ್ಲಿ ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದೇವೆ ಎಂದು ಸರ್ವೈಯಾ ಕಳೆದ ತಿಂಗಳು ಸುದ್ದಿಗಾರರಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News