ಇಸ್ರೋದ ಭೂ ನಿರೀಕ್ಷಣಾ ಉಪಗ್ರಹ ‘ಹೈಸಿಸ್’ನ ಯಶಸ್ವಿ ಉಡಾವಣೆ
ಶ್ರೀಹರಿಕೋಟಾ(ಆಂಧ್ರಪ್ರದೇಶ),ನ.29: ಗುರುವಾರ ಭಾರತದ ಭೂ ನಿರೀಕ್ಷಣಾ ಉಪಗ್ರಹ ‘ಹೈಸಿಸ್’ನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಇಸ್ರೋದ ಶಕ್ತಿಶಾಲಿ ಉಡಾವಣಾ ವಾಹನ ಪಿಎಸ್‌ಎಲ್‌ವಿ-ಸಿ43 ತನ್ನ ಯಶಸ್ಸಿನ ಕಿರೀಟಕ್ಕೆ ಇನ್ನೊಂದು ಗರಿಯನ್ನು ಸೇರಿಸಿಕೊಂಡಿತು.
ಅಮೆರಿಕಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಇತರ ಎಂಟು ದೇಶಗಳ 30 ಉಪಗ್ರಹಗಳನ್ನೂ ಅದು ನಿಗದಿತ ಕಕ್ಷೆಗಳಿಗೆ ಸೇರಿಸಿದೆ.
28 ಗಂಟೆಗಳ ಕ್ಷಣಗಣನೆ ಅಂತ್ಯಗೊಂಡ ಬೆನ್ನಿಗೇ ಬೆಳಿಗ್ಗೆ 9:57ಕ್ಕೆ ಇಲ್ಲಿಯ ಉಡಾವಣಾ ತಾಣದಿಂದ ತನ್ನ 45ನೇ ಹಾರಾಟಕ್ಕಾಗಿ ಕಿತ್ತಳೆ ವರ್ಣದ ಜ್ವಾಲೆಗಳನ್ನು ಹೊರಸೂಸುತ್ತ ನಭಕ್ಕೇರಿದ ಪಿಎಸ್‌ಎಲ್‌ವಿ-ಸಿ43 ರಾಕೆಟ್ ಸರಿಯಾಗಿ 17 ನಿಮಿಷ ಮತ್ತು 27 ಸೆಕೆಂಡ್‌ಗಳ ಬಳಿಕ 380 ಕೆಜಿ ತೂಕದ ಹೈಸಿಸ್‌ನ್ನು ನಿಗದಿತ ಸೂರ್ಯ ಸಮಕಾಲಿಕ ಧ್ರುವೀಯ ಕಕ್ಷೆಯಲ್ಲಿ ಸೇರಿಸಿತು. ಈ ಸಂದರ್ಭ ಉಪಸ್ಥಿತರಿದ್ದ ಇಸ್ರೋದ ಮುಖ್ಯಸ್ಥ ಕೆ.ಶಿವನ್ ಮತ್ತು ವಿಜ್ಞಾನಿಗಳು ಸಂಭ್ರಮಿಸಿದರು.
ಐದು ವರ್ಷಗಳ ಆಯುಷ್ಯವನ್ನು ಹೊಂದಿರುವ ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ ಸ್ಯಾಟೆಲೈಟ್ ಅಥವಾ ಹೈಸಿಸ್ ಭೂಮಿಯ ಮೇಲ್ಮೈ ಅಧ್ಯಯನವನ್ನು ನಡೆಸಿ ಪ್ರಮುಖ ಭೌಗೋಳಿಕ ಅಂಶಗಳ ಮಾಹಿತಿಗಳನ್ನು ರವಾನಿಸಲಿದೆ.
ಇದು ಇಸ್ರೋ ಈ ತಿಂಗಳಲ್ಲಿ ಕೈಗೊಂಡ ಎರಡನೇ ಉಡಾವಣೆಯಾಗಿದೆ. ನ.14ರಂದು ಅದು ಜಿಎಸ್‌ಎಲ್‌ವಿ ಎಮ್‌ಕಿಲ್-ಡಿ2 ಮೂಲಕ ಆಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-29ನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿತ್ತು.