ಸಿಬಿಐ ವರಿಷ್ಠರ 2 ವರ್ಷ ಅಧಿಕಾರವಧಿ ಬದಲಾಯಿಸಲು ಅಸಾಧ್ಯ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಅಲೋಕ್ ವರ್ಮಾ

Update: 2018-11-29 16:46 GMT

 ಹೊಸದಿಲ್ಲಿ, ನ. 29: ತನ್ನನ್ನು ನಿಗದಿತ ಎರಡು ವರ್ಷಗಳ ಅವಧಿಗೆ ನಿಯೋಜಿಸಲಾಗಿತ್ತು ಹಾಗೂ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಸರಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಅಲೋಕ್ ವರ್ಮಾ ಪರ ಹಾಗೂ ಹಿರಿಯ ವಕೀಲ ಫಾಲಿ ನಾರಿಮನ್, ವರ್ಮಾ ಅವರನ್ನು 2017 ಫೆಬ್ರವರಿ 1ರಂದು ನಿಯೋಜಿಸಲಾಗಿತ್ತು. ಅವರಿಗೆ ನಿಗದಿತ ಎರಡು ವರ್ಷಗಳ ಅವಧಿ ಇದೆ ಎಂದು ಕಾನೂನು ಹೇಳುತ್ತದೆ. ಆದುದರಿಂದ ಅವರನ್ನು ವರ್ಗಾವಣೆ ಮಾಡಲು ಕೂಡ ಸಾಧ್ಯವಿಲ್ಲ ಎಂದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂತಿಗಳಾದ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಮುಂದೆ ವಾದ ಮಂಡಿಸಿದ ನಾರಿಮನ್, ಅಲೋಕ್ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸಲು ಶಿಫಾರಸು ಮಾಡಿ ಇಂತಹ ಆದೇಶ ಮಂಜೂರು ಮಾಡಿರುವುದಕ್ಕೆ ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಯಾವುದೇ ಆಧಾರ ಇಲ್ಲ ಎಂದರು.

‘‘ವಿನೀತ್ ನಾರಾಯಣ್ ತೀರ್ಪಿನ ಬಗ್ಗೆ ಕಟ್ಟು ನಿಟ್ಟಿನ ವಿವರಣೆ ನೀಡಬೇಕಿದೆ. ಇದು ವರ್ಗಾವಣೆ ಅಲ್ಲ. ವರ್ಮಾ ಅವರಿಂದ ಅಧಿಕಾರ ಹಾಗೂ ಕರ್ತವ್ಯವನ್ನು ಕಸಿದುಕೊಳ್ಳಲಾಗಿದೆ. ಹಾಗಾದರೆ, ನರೈನ್ ತೀರ್ಪು ಹಾಗೂ ಕಾನೂನಿನ ಅಗತ್ಯತೆ ಏನಿದೆ ?’’ ಎಂದು ನಾರಿಮನ್ ಪ್ರಶ್ನಿಸಿದ್ದಾರೆ. ಭಾರತದ ಅತ್ಯುಚ್ಛ ಶ್ರೇಣಿಯ ಸರಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪದ ತನಿಖೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ 1997ರಲ್ಲಿ ವಿನೀತ್ ನರೈನ್ ತೀರ್ಪು ನೀಡಿತ್ತು.

1997ರ ಹಿಂದೆ ಸಿಬಿಐ ನಿರ್ದೇಶಕ ಅಧಿಕಾರವಧಿ ನಿಗದಿಗೊಳಿಸಿರಲಿಲ್ಲ. ಸರಕಾರ ಯಾವುದೇ ರೀತಿಯಲ್ಲಿ ಅವರನ್ನು ವಜಾಗೊಳಿಸಬಹುದಿತ್ತು. ಆದರೆ, ವಿನೀತ್ ನರೈನ್ ತೀರ್ಪು ಸಿಬಿಐ ನಿರ್ದೇಶಕರು ಕನಿಷ್ಠ ಎರಡು ವರ್ಷಗಳ ಕಾಲ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅಧಿಕಾರವಧಿ ನಿಗದಿಪಡಿಸಿತ್ತು. ಸಿಬಿಐ ನಿರ್ದೇಶಕರನ್ನು ನಿಯೋಜಿಸುವ ಹಾಗೂ ವಜಾಗೊಳಿಸುವ ಷರತ್ತನ್ನು ನಾರಿಮನ್ ಉಲ್ಲೇಖಿಸಿದರು ಹಾಗೂ ದಿಲ್ಲಿ ವಿಶೇಷ ಪೊಲೀಸ್ ಸ್ಥಾಪನಾ (ಡಿಎಸ್‌ಪಿಇ) ಕಾಯ್ದೆ 1946ರ ನಿಯಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News