ಅಯೋಧ್ಯೆ ಕುರಿತು ಅಧ್ಯಾದೇಶಕ್ಕೆ ಕಕ್ಷಿದಾರರಿಂದಲೇ ವಿರೋಧ

Update: 2018-11-29 17:37 GMT

ಅಯೋಧ್ಯಾ, ನ.29: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಅಧ್ಯಾದೇಶವನ್ನು ಹೊರಡಿಸಬೇಕು ಎಂಬ ಯೋಗಗುರು ಬಾಬಾ ರಾಮದೇವ್ ಅವರ ಹೇಳಿಕೆಯನ್ನು ಗುರುವಾರ ಇಲ್ಲಿ ಪ್ರಶ್ನಿಸಿದ ಅಯೋಧ್ಯೆ ಪ್ರಕರಣದ ಕಕ್ಷಿಗಳಲ್ಲೊಂದಾಗಿರುವ ನಿರ್ಮೋಹಿ ಅಖಾಡಾದ ಮುಖ್ಯಸ್ಥ ಮಹಂತ ದಿನೇಂದ್ರ ದಾಸ್ ಅವರು,ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪಿಗಾಗಿ ತಾವು ಕಾಯುವುದಾಗಿ ತಿಳಿಸಿದರು.

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘‘ಅಧ್ಯಾದೇಶವನ್ನು ತರುವ ಅಗತ್ಯವೇನಿದೆ? ಸರ್ವೋಚ್ಚ ನ್ಯಾಯಾಲಯವು ಈ ವಿವಾದದ ವಿಚಾರಣೆಯನ್ನು ನಡೆಸುತ್ತಿದೆ. ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ನ್ಯಾಯಾಲಯವು ಏನು ನಿರ್ಧಾರವನ್ನು ಕೈಗೊಳ್ಳುತ್ತದೆಯೋ ಅದೇ ಅಂತಿಮವಾಗಲಿದೆ. ನಾವು ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯುತ್ತೇವೆ ’’ ಎಂದು ಹೇಳಿದರು.

  ಅಯೋಧ್ಯೆಯಲ್ಲಿ ರಾಮ ಮಂದಿರವು ನಿರ್ಮಾಣಗೊಳ್ಳದಿದ್ದರೆ ಜನರು ಬಿಜೆಪಿಯಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ ಎಂದು ಮಂಗಳವಾರ ಹರಿದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದ್ದ ರಾಮದೇವ್ ಅವರು,ಈ ಸಂಬಂಧ ಅಧ್ಯಾದೇಶವನ್ನು ತರುವುದೊಂದೇ ಈಗ ಕೇಂದ್ರ ಸರಕಾರಕ್ಕಿರುವ ಮಾರ್ಗ ಎಂದು ಒತ್ತಿ ಹೇಳಿದ್ದರು.

ಸಂಘ ಪರಿವಾರ ಸಂಘಟನೆಗಳು ಮತ್ತು ಶಿವಸೇನೆ ಕೂಡ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಅಧ್ಯಾದೇಶವನ್ನು ಹೊರಡಿಸುವಂತೆ ಆಗ್ರಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News