ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆಯೊಂದಿಗೆ ಆಗಮಿಸಿದ ತಮಿಳುನಾಡು ರೈತರು

Update: 2018-11-29 17:57 GMT

 ಹೊಸದಿಲ್ಲಿ: ಆತ್ಮಹತ್ಯೆ ಮಾಡಿಕೊಂಡ ತಮ್ಮ ಇಬ್ಬರು ಸಹವರ್ತಿ ರೈತರ ತಲೆಬುರುಡೆಯೊಂದಿಗೆ ತಮಿಳುನಾಡು ರೈತರ ಗುಂಪೊಂದು ದಿಲ್ಲಿಗೆ ಗುರುವಾರ ಆಗಮಿಸಿದೆ ಹಾಗೂ ಶುಕ್ರವಾರ ಸಂಸತ್‌ಗೆ ತೆರಳಲು ತಡೆ ಒಡ್ಡಿದರೆ ನಗ್ನವಾಗಿ ರ್ಯಾಲಿ ನಡೆಸಲಾಗುವುದು ಎಂದು ಎಚ್ಚರಿಸಿದೆ.

ರಾಷ್ಟ್ರೀಯ ದಕ್ಷಿಣ ಭಾರತ ನದಿ ಅಂತರ್‌ ಜೋಡಣೆ ಕೃಷಿಕರ ಸಂಘಟನೆಯ ಸುಮಾರು 1200 ರೈತರು ಗುರುವಾರ ಬೆಳಗ್ಗೆ ದಿಲ್ಲಿಗೆ ತಲುಪಿದ್ದಾರೆ ಎಂದು ಸಂಘಟನೆಯ ನಾಯಕ ಪಿ. ಅಯ್ಯಾಕನ್ನು ತಿಳಿಸಿದ್ದಾರೆ.

ನಾಳೆ ಸಂಸತ್‌ಗೆ ರ್ಯಾಲಿ ನಡೆಸುವುದನ್ನು ಪೊಲೀಸರು ತಡೆದರೆ, ನಾವು ನಗ್ನರಾಗಿ ರ್ಯಾಲಿ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ತಮ್ಮ ಸಂಘಟನೆಗೆ ಸೇರಿದ ತಿರುಚಿ ಹಾಗೂ ಕರೂರನ್‌ನ ಇನ್ನಷ್ಟು ರೈತರು ರ್ಯಾಲಿಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಆಗಮಿಸಲಿದ್ದಾರೆ ಎಂದು ಅಯ್ಯಾಕನ್ನು ತಿಳಿಸಿದ್ದಾರೆ.

ರೈತರು ಎರಡು ತಲೆಬುರುಡೆಗಳನ್ನು ಹಿಡಿದುಕೊಂಡಿದ್ದು, ಇದು ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ತಮ್ಮ ಇಬ್ಬರ ಸಹವರ್ತಿಗಳ ತಲೆಬುರುಡೆ ಎಂದು ಅವರು ಪ್ರತಿಪಾದಿಸಿದ್ದಾರೆ.

ರೈತರ ಬೇಡಿಕೆಗಳು -ಸಂಸತ್ತಿನಲ್ಲಿ ಕೃಷಿಕರ ಬಿಕ್ಕಟ್ಟಿನ ಕುರಿತು ಪೂರ್ಣ ಪ್ರಮಾಣದ ಚರ್ಚೆ. -ರೈತರಿಗೆ ಸಾಲದಿಂದ ಮುಕ್ತಿ ವಿಧೇಯಕ-2018 ಅಂಗೀಕಾರ.

-ಕೃಷಿ ಉತ್ಪನ್ನಗಳಿಗೆ ಯೋಗ್ಯ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ರೈತರ ಹಕ್ಕು ಮಸೂದೆ-2018 ಅಂಗೀಕಾರ.

ನಾಗರಿಕ ಸಮಾಜದ ಬೆಂಬಲ

ಕೃಷಿಕರ ಬಿಕ್ಕಟ್ಟು ದೀರ್ಘಾವಧಿಯಲ್ಲಿ ಕೇವಲ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸುವಂತಿಲ್ಲ. ಶೀಘ್ರದಲ್ಲಿ ಇದರ ಒತ್ತಡ ನಗರ ಭಾರತದ ಮೇಲೂ ಬೀಳಲಿದೆ ಎಂದು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಹೇಳಿದ್ದಾರೆ.

ರೈತರು ಹಾಗೂ ರೈತ ಕಾರ್ಮಿಕರ ಜೊತೆಗೆ ‘ನ್ಯಾಶನಲ್ ಫಾರ್ ಫಾರ್ಮರ್ಸ್’ ವೇದಿಕೆ ಅಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು, ಕಲಾವಿದರು, ಮಧ್ಯಮವರ್ಗದ ನಗರದ ವೃತ್ತಿಪರರು ಪಾಲ್ಗೊಳ್ಳಲಿದ್ದಾರೆ. ಈ ವೇದಿಕೆಯ ಹಿಂದಿರುವವರು ಸಾಯಿನಾಥ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News