ತಾಜ್‌ಮಹಲ್ ಕುರಿತ ಯೋಜನೆ ಬಹಿರಂಗಗೊಳಿಸಿ: ಆದಿತ್ಯನಾಥ್ ಸರಕಾರಕ್ಕೆ ಸುಪ್ರೀಂ ಸೂಚನೆ

Update: 2018-11-29 18:12 GMT

ಹೊಸದಿಲ್ಲಿ, ನ.29: ಉತ್ತರಪ್ರದೇಶ ರೂಪಿಸಿರುವ ತಾಜ್‌ಮಹಲ್ ಅವಲೋಕನ ಯೋಜನೆಯನ್ನು ಗುಪ್ತವಾಗಿಡುವುದರಲ್ಲಿ ಅರ್ಥವಿಲ್ಲ. ತಕ್ಷಣ ಈ ಕುರಿತ ವಿವರಗಳನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ವಿಶ್ವಪ್ರಸಿದ್ಧ ತಾಜ್‌ಮಹಲ್ ಸ್ಮಾರಕವನ್ನು ರಕ್ಷಿಸಲು ಕೈಗೊಂಡಿರುವ ಯೋಜನೆಯ  ವಿವರವನ್ನು ನವೆಂಬರ್ 15ರ ಒಳಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್, ಉ.ಪ್ರದೇಶ ಸರಕಾರಕ್ಕೆ ಸೂಚಿಸಿತ್ತು. ಯೋಜನೆಯನ್ನು ‘ದಿಲ್ಲಿ ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್ ’ ಸಿದ್ಧಪಡಿಸಲಿದೆ.

 ಕೆಲ ದಿನಗಳಲ್ಲೇ ಈ ಯೋಜನೆಯನ್ನು ಸರಕಾರಕ್ಕೆ ಸಲ್ಲಿಸುವುದಾಗಿ ಸಂಸ್ಥೆ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಮುಂದಿನ ಎಂಟು ವಾರದೊಳಗೆ ತಾಜ್‌ಮಹಲ್ ಪರಂಪರೆ ಯೋಜನೆಯ ಪ್ರಥಮ ಕಂತನ್ನು ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಸರಕಾರದ ಪ್ರತಿನಿಧಿಯಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಎನ್‌ಎಸ್ ನಾಡಕರ್ಣಿ ನ್ಯಾಯಾಲಯಕ್ಕೆ ತಿಳಿಸಿದರು. ತಾಜ್‌ಮಹಲ್ ಸ್ಮಾರಕ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿರುವ ಹಿನ್ನೆಲೆಯಲ್ಲಿ ಈ ವರದಿಯ ಪ್ರತಿಯನ್ನು ವಿಶ್ವಸಂಸ್ಥೆಯ ಶಿಕ್ಷಣ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗೆ ಸಲ್ಲಿಸಲಾಗುವುದು ಎಂದವರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News