ಜಮ್ಮು ಕಾಶ್ಮೀರದಲ್ಲಿ ಸೇನೆಗೆ ಡ್ರೋನ್ ಬಳಸುವ ಸಾಮರ್ಥ್ಯವಿದೆ : ರಾವತ್

Update: 2018-11-29 18:16 GMT

ಶ್ರೀನಗರ, ನ.29: ಜಮ್ಮು ಕಾಶ್ಮೀರದಲ್ಲಿ ಅಗತ್ಯಬಿದ್ದರೆ ಶಸ್ತ್ರಸಹಿತ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸುವ ಸಾಮರ್ಥ್ಯ ಸೇನೆಗಿದೆ ಎಂದು ಸೇನಾಪಡೆಯ ಮುಖ್ಯಸ್ಥ ಜ ಬಿಪಿನ್ ರಾವತ್ ಹೇಳಿದ್ದಾರೆ.

ದಿಲ್ಲಿಯ ಇನ್‌ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡಿ ಆ್ಯಂಡ್ ಅನಾಲಿಸೀಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈ.ಬಿ.ಚವಾಣ್ ಸ್ಮಾರಕ ಉಪನ್ಯಾಸ ನೀಡಿದ ಬಳಿಕ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ದಾಳಿಯಿಂದ ಆಗುವ ಪರಿಣಾಮಗಳನ್ನು ಒಪ್ಪಿಕೊಳ್ಳಲು ದೇಶ ಸಿದ್ಧವಿದ್ದರೆ ಡ್ರೋನ್ ದಾಳಿ ನಡೆಸಬಹುದು ಎಂದಿದ್ದಾರೆ.

 ಅಮೆರಿಕವು ಈ ರೀತಿಯ ಡ್ರೋನ್‌ಗಳನ್ನು ಬಳಸುತ್ತಿದೆ. ಆದರೆ ಮಾನವರಹಿತ ಡ್ರೋನ್ ವಿಮಾನದ ಮೂಲಕ ನಡೆಸುವ ದಾಳಿಯಲ್ಲಿ ಕೆಲವೊಮ್ಮೆ ತಪ್ಪು ಸಂಭವಿಸಬಹುದು. ಈ ಅನಾಹುತಗಳನ್ನು ಒಪ್ಪಿಕೊಳ್ಳಲು ದೇಶ ಸಿದ್ಧವಿದ್ದರೆ ಡ್ರೋನ್ ದಾಳಿ ನಡೆಸಬಹುದು ಎಂದು ರಾವತ್ ಹೇಳಿದ್ದಾರೆ. ಕಾಶ್ಮೀರದಲ್ಲಿ ಭದ್ರತಾ ಪಡೆಗಳತ್ತ ಕಲ್ಲೆಸೆಯುವವರ ವಿರುದ್ಧ ಕ್ರಮ ಕೈಗೊಂಡರೂ ಆ ಬಗ್ಗೆ ಬಹಳ ಖಂಡನೆ, ಟೀಕೆ ಎದುರಾಗುತ್ತದೆ. ಇಂತಹ ಪ್ರಕ್ರಿಯೆಗಳು ಡ್ರೋನ್ ಬಳಸಲು ಇರುವ ಬಹುದೊಡ್ಡ ತಡೆಯಾಗಿದೆ ಎಂದವರು ಹೇಳಿದ್ದಾರೆ.

ಪಾಕಿಸ್ತಾನವು ಭಾರತದ ವಿರುದ್ಧ ‘ಹೈಬ್ರಿಡ್ ಯುದ್ಧ’ವನ್ನು ಪ್ರಯೋಗಿಸುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರಕಾರದ ಏಜೆನ್ಸಿಗಳು ನಡೆಸುತ್ತಿರುವ ಭಯೋತ್ಪಾದಕರ ತರಬೇತಿ ಶಿಬಿರಗಳು ಕಾರ್ಯಾಚರಿಸುತ್ತಿವೆ ಎಂಬುದನ್ನು ಇಡೀ ವಿಶ್ವವೇ ಅರಿತಿದೆ. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಎಲ್ಲಾ ಹಿಂಸಾಚಾರ ಘಟನೆಗಳು ನೆರೆ ರಾಷ್ಟ್ರದ ಬೆಂಬಲದಿಂದ ನಡೆಯುತ್ತಿವೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದನ್ನು ಎದುರಿಸಲು ನಮಗೆ ಎರಡು ಆಯ್ಕೆಗಳಿವೆ. ಒಂದು ಆಕ್ರಮಣಕಾರಿ ಹೈಬ್ರಿಡ್ ಯುದ್ಧದ ಕಾರ್ಯತಂತ್ರ. ಎರಡನೆಯದು ಪೂರ್ವಭಾವಿ ಸಿದ್ಧತೆಯ ಮೂಲಕ ಈ ಬೆದರಿಕೆಯನ್ನು ಎದುರಿಸುವುದು ಎಂದು ರಾವತ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News