ರೈತರ ಬೃಹತ್ ರ‍್ಯಾಲಿಯನ್ನು ಜಂತರ್‌ಮಂತರ್‌ನಲ್ಲಿ ತಡೆದ ಪೊಲೀಸರು
ಹೊಸದಿಲ್ಲಿ, ನ.30: ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಗರಿಷ್ಠ ಬೆಲೆ ನೀಡಬೇಕು ಹಾಗೂ ಸ್ವಾಮಿನಾಥನ್ ವರದಿ ಜಾರಿ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ದೇಶದ ವಿವಿಧ ಭಾಗಗಳಿಂದ ಹರಿದುಬಂದ ಸಾವಿರಾರು ರೈತರು ಶುಕ್ರವಾರ ಬೆಳಗ್ಗೆ ದಿಲ್ಲಿಯ ಐತಿಹಾಸಿಕ ರಾಮಲೀಲಾ ಮೈದಾನದಿಂದ ಸಂಸತ್ ಭವನದತ್ತ ಬೃಹತ್ ಕಾಲ್ನಡಿಗೆ ರ‍್ಯಾಲಿ ಆರಂಭಿಸಿದ್ದು, ದಿಲ್ಲಿ ಪೊಲೀಸರು ಜಂತರ್‌ಮಂತರ್‌ನಲ್ಲಿ ರ‍್ಯಾಲಿಗೆ ತಡೆಯೊಡ್ಡಿದ್ದಾರೆ.
ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮಬಂಗಾಳ, ಕರ್ನಾಟಕ ಹಾಗೂ ಉತ್ತರಪ್ರದೇಶ ರಾಜ್ಯಗಳ ರೈತರು ರೈಲು, ಬಸ್ ಹಾಗೂ ಇತರ ಸಾರಿಗೆ ವ್ಯವಸ್ಥೆ ಮೂಲಕ ಗುರುವಾರ ದಿಲ್ಲಿಗೆ ಆಗಮಿಸಿ ರಾಮಲೀಲಾ ಮೈದಾನದಲ್ಲಿ ರಾತ್ರಿ ಕಳೆದಿದ್ದರು.
ತೆಲಂಗಾಣದಿಂದ ಬಂದ ರೈತ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ತಮ್ಮ ಗಂಡಂದಿರ ಫೋಟೊಗಳನ್ನು ಕುತ್ತಿಗೆಗೆ ನೇತಾಡಿಸಿಕೊಂಡು ದಿಲ್ಲಿಯ ಬೀದಿಗಳಲ್ಲಿ ನಡೆದಾಡಿದರು.
ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಬಿಜ್ವಾಸನ್‌ನಿಂದ ರಾಮಲೀಲಾ ಮೈದಾನದ ತನಕ 26 ಕಿ.ಮೀ.ದೂರ ಪ್ರತಿಭಟನಾ ರ‍್ಯಾಲಿ ನಡೆಸಿ ಗುರುವಾರ ದಿಲ್ಲಿಗೆ ಬಂದಿದ್ದರು. ಒಡಿಶಾ, ಹರ್ಯಾಣ ಹಾಗೂ ರಾಜಸ್ಥಾನದ ರೈತರುಗಳು ಯೋಗೇಂದ್ರ ಯಾದವ್ ಅವರ ರ‍್ಯಾಲಿಗೆ ಕೈಜೋಡಿಸಿದರು.
ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳೆದ ರಾತ್ರಿ ಕೆಲವು ಸಮಯ ಧರಣಿ ನಿರತ ರೈತರೊಂದಿಗೆ ಕಾಲ ಕಳೆದಿದ್ದರು. ‘‘ನಾವೀಗ ಬರಗಾಲಕ್ಕಿಂತ ಭೀಕರ ಪರಿಸ್ಥಿತಿಗೆ ಸಾಕ್ಷಿಯಾಗುತ್ತಿದ್ದೇವೆ. ಕಳೆದ ಎರಡು ವರ್ಷಗಳಿಂದ ರೈತರ ಆತ್ಮಹತ್ಯೆ ಅಂಕಿ-ಅಂಶವನ್ನೇ ಪ್ರಕಟಿಸಲಾಗುತ್ತಿಲ್ಲ. 2015ರಲ್ಲಿ ಇದನ್ನು ನಿಲ್ಲಿಸಲಾಗಿದೆ’’ ಎಂದು ಸಾಯಿನಾಥ್ ಹೇಳಿದ್ದಾರೆ.
''ಪ್ರತಿಭಟನಾನಿರತ ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಆ ಬಳಿಕ ಷರತ್ತಿನೊಂದಿಗೆ ಜಂತರ್‌ಮಂತರ್‌ಗೆ ತೆರಳಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿದೆ. ಭದ್ರತೆ, ಟ್ರಾಫಿಕ್ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸರಿಯಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ರೈತರು ನಾವು ವಿಧಿಸಿರುವ ಷರತ್ತುಗಳನ್ನು ಪಾಲಿಸುವ ವಿಶ್ವಾಸವಿದೆ'' ಎಂದು ಪೊಲೀಸ್ ಉಪಾಯುಕ್ತ ಮಾಧುರ್ ವರ್ಮಾ ಹೇಳಿದ್ದಾರೆ.
ಸಂಜೆ ವೇಳೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಭಟನಾ ನಿರತ ರೈತರೊಂದಿಗೆ ಸೇರಿಕೊಳ್ಳಲಿದ್ದಾರೆ. ಜೆಡಿಯುನ ಹಿರಿಯ ನಾಯಕ ಕೆಸಿ ತ್ಯಾಗಿ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಹಾಗೂ ಸಮಾಜವಾದಿ ಪಕ್ಷದ ಇತರ ಮುಖಂಡರು ಕೂಡ ಪ್ರತಿಭಟನೆಯಲ್ಲಿ ಕೈಜೋಡಿಸುವ ಸಾಧ್ಯತೆಯಿದೆ.