ನಾವು 'ಶೋಪೀಸ್'ಗಳಾಗಿ ಮುಂದುವರಿಯಲು ಇಚ್ಛಿಸುವುದಿಲ್ಲ
ಭುಬನೇಶ್ವರ್,ನ.30 : ದಶಕಗಳ ಕಾಲ ಒಡಿಶಾಗೆ ಸೇವೆ ಸಲ್ಲಿಸಿರುವ ಆತ್ಮಗೌರವವುಳ್ಳ ರಾಜಕಾರಣಿಗಳಾಗಿರುವ ನಾವು ಪಕ್ಷದಲ್ಲಿ ಶೋಪೀಸ್ (ಪ್ರದರ್ಶನದ ವಸ್ತು) ಗಳಾಗಿ ಮುಂದುವರಿಯಲು ಇಚ್ಛಿಸುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಹಿರಿಯ ನಾಯಕರಾದ ದಿಲೀಪ್ ರೇ ಹಾಗೂ ಬಿಜೊಯ್ ಮಹಾಪಾತ್ರ ಹೇಳಿದ್ದಾರೆ. ಮಾಜಿ ಅಧಿಕಾರಿ ಅಪರಾಜಿತ ಸಾರಂಗಿ ಬಿಜೆಪಿಯ ತೆಕ್ಕೆಗೆ ಸೇರಿದ ಬೆನ್ನಲ್ಲೇ ದಿಲೀಪ್ ಹಾಗೂ ಬಿಜೊಯ್ ಅವರ ರಾಜೀನಾಮೆ ಪಕ್ಷಕ್ಕೆ ಆಘಾತ ತಂದಿದೆ.
"ನಮಗೆ ರಾಜ್ಯದ ಹಿತಾಸಕ್ತಿ ಅತ್ಯಂತ ಮುಖ್ಯ. ಯಾವುದೇ ಹುದ್ದೆ, ಅಧಿಕಾರ ಅಥವಾ ಟಿಕೆಟ್‍ಗಾಗಿ ನಾವು ನಮ್ಮ ಆತ್ಮಗೌರವದ ಜತೆ ಯಾವತ್ತೂ ರಾಜಿ ಮಾಡಿಲ್ಲ. ನಾವು ಒಳ್ಳೆಯ ಉದ್ದೇಶದಿಂದ ನಿಮಗೆ ನೀಡಿದ ಸಲಹೆಗಳನ್ನು ಕೆಲ ಸ್ವಹಿತಾಸಕ್ತಿಯ ವ್ಯಕ್ತಿಗಳು ಬೆದರಿಕೆ ಎಂದು ಅರ್ಥೈಸಿಕೊಂಡು ಕುತಂತ್ರ ನಡೆಸಿ ನಮ್ಮ ಕ್ಷೇತ್ರಗಳಲ್ಲಿ ನಮ್ಮ ವಿರುದ್ಧವೇ ಅಪಪ್ರಚಾರ ನಡೆಸಿದ್ದಾರೆ,'' ಎಂದು ಇಬ್ಬರು ನಾಯಕರೂ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ರೂರ್ಕೆಲಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರೇ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಮಹಾಪಾತ್ರ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದರು. ಇಬ್ಬರೂ ಬಿಜು ಜನತಾ ದಳವನ್ನು ಸದ್ಯದಲ್ಲಿಯೇ ಸೇರುವ ಸಾಧ್ಯತೆಯಿದೆ.
ಈ ಇಬ್ಬರು ನಾಯಕರ ನಿರ್ಗಮನ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಸಂತ್ ಪಾಂಡ ಹೇಳಿದ್ದಾರೆ.