×
Ad

ರೈತರು ಮೋದಿಯಿಂದ ಉಡುಗೊರೆಗಳನ್ನು ಕೇಳುತ್ತಿಲ್ಲ, ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ: ರಾಹುಲ್ ಗಾಂಧಿ

Update: 2018-11-30 16:24 IST
ಚಿತ್ರ ಕೃಪೆ : ANI

ಹೊಸದಿಲ್ಲಿ,ನ.30 : ಸಾಲ ಮನ್ನಾ ಹಾಗೂ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಹಿತ ತಮ್ಮ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದ ವಿವಿಧೆಡೆಗಳಿಂದ ರಾಜಧಾನಿ ದಿಲ್ಲಿಗೆ ಬಂದಿರುವ ಸಾವಿರಾರು ರೈತರು ಜಂತರ್ ಮಂತರ್ ತಲುಪಿದ್ದಾರೆ.

ಸುಮಾರು ಒಂದು ಲಕ್ಷ ರೈತರು ಇಂದು ರಾಮಲೀಲಾ ಮೈದಾನದಲ್ಲಿ ಸಭೆ ಸೇರಲಿದ್ದಾರೆಂದು ಈ ರೈತರ ದಿಲ್ಲಿ ಚಲೋ ಯಾತ್ರೆಯನ್ನು ಸಂಘಟಿಸಿರುವ ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಸಮಿತಿ ಹೇಳಿಕೊಂಡಿದೆ. ಆಂಧ್ರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಿಂದ  ಸಾವಿರಾರು  ರೈತರು ರೈಲುಗಳಲ್ಲಿ ಬಂದಿದ್ದರೆ ಇನ್ನೂ ಹಲವಾರು ಮಂದಿ ಬಸ್ಸುಗಳಲ್ಲಿ ಹಾಗೂ ಇತರ ವಾಹನಗಳಲ್ಲಿ ದಿಲ್ಲಿಗೆ ಆಗಮಿಸಿದ್ದಾರೆ ಎಂದು ಸಮಿತಿ ಹೇಳಿದೆ. ಇತ್ತೀಚಿಗಿನ ವರ್ಷಗಳಲ್ಲಿ ಇದು ದೇಶದ ಅತ್ಯಂತ ದೊಡ್ಡ ರೈತರ ರ್ಯಾಲಿಯಾಗಲಿದೆ ಎಂದು ಸಮಿತಿ ತಿಳಿಸಿದೆ. ಕೃಷಿ ಕ್ಷೇತ್ರದ ಬಿಕ್ಕಟ್ಟನ್ನು ಪರಿಹರಿಸಬೇಕೆಂದು ಆಗ್ರಹಿಸಿ ರೈತರು ಸಂಸತ್ತಿನತ್ತ  ಸಾಗುತ್ತಿದ್ದಾರೆ.

ಜಂತರ್ ಮಂತರ್ ನಲ್ಲಿ ಹಲವಾರು ಹಿರಿಯ ರಾಜಕೀಯ ನಾಯಕರ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ "ರೈತರು ಮೋದಿಯಿಂದ ಉಡುಗೊರೆಗಳನ್ನು ಕೇಳುತ್ತಿಲ್ಲ, ಬದಲಾಗಿ ತಮ್ಮ ಹಕ್ಕುಗಳನ್ನು ಕೇಳುತ್ತಿದ್ಧಾರೆ. ರೈತರ ದನಿಯನ್ನು ಮೌನವಾಗಿಸಲು ಸಾಧ್ಯವಿಲ್ಲ ಈ ದೇಶ ಒಬ್ಬ ವ್ಯಕ್ತಿ ಯಾ ಒಂದು ಪಕ್ಷದಿಂದ ನಡೆಯುತ್ತಿಲ್ಲ, ಅದು ಮಹಿಳೆಯರು, ಯುವಜನತೆ ಮತ್ತು ರೈತರಿಂದ ನಡೆಯುತ್ತಿದೆ" ಎಂದರು.

ನರ್ಮದಾ ¨ಚಾವ್ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಮಾತನಾಡಿ, ಕೇಂದ್ರ ಸರಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರೈತರಿಗಾಗಿ ಒಂದೇ ಒಂದು ಮಹತ್ವದ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸೀತಾರಾಂ ಯಚೂರಿ ತಮ್ಮ ಭಾಷಣದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ನಾವು ನಿಮ್ಮ ವಿಚಾರಗಳನ್ನು  ಸಂಸತ್ತಿನಲ್ಲಿ ಎತ್ತುತ್ತೇವೆ. ಮೋದಿ ಸರಕಾರದ ಅವಧಿಯಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದರು.

ದಿಲ್ಲಿ ಪೊಲೀಸರು ರೈತರ ರ್ಯಾಲಿಯ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದಾರೆ. ಸುಮಾರು 3,500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News