ಕಡಲೆ ಬೇಳೆಯ ಆರೋಗ್ಯಲಾಭಗಳು ಗೊತ್ತೇ.....?

Update: 2018-12-01 10:49 GMT

ಸಮೃದ್ಧ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಕಡಲೆ ಬೇಳೆಯು ಶಕ್ತಿಯ ಆಗರವಾಗಿದೆ. ಕಡಲೆ ಬೇಳೆಯಲ್ಲಿ ನಾರು, ಸತುವು, ಕ್ಯಾಲ್ಸಿಯಂ, ಪ್ರೋಟಿನ್ ಮತ್ತು ಫಾಲೇಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಕಡಿಮೆ ಕೊಬ್ಬು ಹೊಂದಿರುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಅತ್ಯಂತ ಕಡಿಮೆ ಹೈಪೊಗೈಸೆಮಿಕ್ ಸೂಚಿಯನ್ನು ಹೊಂದಿರುವುದರಿಂದ ಮಧುಮೇಹಿಗಳಿಗೂ ಒಳ್ಳೆಯ ಆಹಾರವಾಗಿದೆ. ಇದರ ಕೆಲವು ಆರೋಗ್ಯಲಾಭಗಳು ಹೀಗಿವೆ......

► ಶಕ್ತಿಯನ್ನು ಹೆಚ್ಚಿಸುತ್ತದೆ

ಕಡಲೆ ಬೇಳೆಯಲ್ಲಿ ಸಮೃದ್ಧವಾಗಿರುವ ಪ್ರೋಟಿನ್‌ಗಳು ಶರೀರದ ಶಕ್ತಿಯನ್ನು ಹೆಚ್ಚಿಸುತ್ತವೆ. ಅದರಲ್ಲಿರುವ ಮಿಥಿಯೊನೈನ್ ಎಂಬ ಅಮಿನೊ ಆಮ್ಲವು ಜೀವಕೋಶಗಳ ಕಾರ್ಯ ನಿರ್ವಹಣೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಶರೀರದ ಒಟ್ಟಾರೆ ಶಕ್ತಿಯನ್ನು ಹೆಚ್ಚಿಸುವಲ್ಲಿ ನೇರ ಪರಿಣಾಮವನ್ನು ಬೀರುತ್ತದೆ. ಕಡಲೆ ಬೇಳೆ ಮಾಂಸಖಂಡಗಳಿಗೂ ಶಕ್ತಿಯನ್ನು ನೀಡುತ್ತದೆ.

► ಮಧುಮೇಹವನ್ನು ತಡೆಯುತ್ತದೆ

 ಕಡಲೆ ಬೇಳೆಯಲ್ಲಿ ಸಾಕಷ್ಟು ನಾರು ಇರುತ್ತದೆ. ಸಮೃದ್ಧ ನಾರನ್ನೊಳಗೊಂಡಿರುವ ಆಹಾರವು ವಿಶೇಷವಾಗಿ ಟೈಪ್ 1 ಮತ್ತು 2 ಮಧುಮೇಹವನ್ನು ಹೊಂದಿರುವವರಿಗೆ ಒಳ್ಳೆಯದು ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಕಡಲೆ ಬೇಳೆಯಲ್ಲಿರುವ ನಾರು ಗ್ಲುಕೋಸ್‌ನ ಹೀರುವಿಕೆಯಲ್ಲಿ ಮತ್ತು ರಕ್ತದಲ್ಲಿ ಇನ್ಸುಲಿನ್ ಹಾಗೂ ಸಕ್ಕರೆಯ ಸಹಜ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

► ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಕಡಲೆ ಬೇಳೆಯಲ್ಲಿರುವ ನಾರು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮತ್ತು ಮಲಬದ್ಧತೆಯನ್ನು ತಡೆಯುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಕಡಲೆ ಬೇಳೆಯ ನಿಯಮಿತ ಸೇವನೆಯು ವಾಂತಿ, ಅತಿಸಾರ,ಅಜೀರ್ಣ ಮತ್ತು ಅಗ್ನಿಮಾಂದ್ಯದಂತಹ ಜೀರ್ಣ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ಅದರಲ್ಲಿಯ ಪಿಷ್ಟವು ಮಲಬದ್ಧತೆಯನ್ನು ತಡೆಯುತ್ತದೆ. ಕಡಲೆ ಬೇಳೆಯಲ್ಲಿನ ಫೈಟೊಕೆಮಿಕಲ್‌ಗಳು ಜೀರ್ಣನಾಳದಲ್ಲಿಯ ಅನಗತ್ಯ ತ್ಯಾಜ್ಯವನ್ನು ನಿವಾರಿಸುವ ಮೂಲಕ ಅದನ್ನು ಸ್ವಚ್ಛವಾಗಿರಿಸುತ್ತವೆ.

► ರಕ್ತಹೀನತೆಯನ್ನು ಗುಣಪಡಿಸುತ್ತದೆ

ಕಡಲೆ ಬೇಳೆಯಲ್ಲಿ ಸಮೃದ್ಧವಾಗಿರುವ ಕಬ್ಬಿಣ ಮತ್ತು ಫಾಲೇಟ್‌ಗಳು ಶರೀರದಲ್ಲಿ ಕಬ್ಬಿಣಾಂಶದ ಕೊರತೆಯನ್ನು ನಿವಾರಿಸಲು ನೆರವಾಗುತ್ತವೆ. ಅದು ಹಿಮೊಗ್ಲೋಬಿನ್ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಮಹಿಳೆಯರಲ್ಲಿ ಗರ್ಭಾವಸ್ಥೆ, ಹಾಲೂಡಿಸುವಿಕೆಯ ಅವಧಿಯಲ್ಲಿ ಮತ್ತು ರಜಸ್ವಲೆಯರಾದ ಸಂದರ್ಭದಲ್ಲಿ ಅತ್ಯಂತ ಲಾಭಕಾರಿಯಾಗಿದೆ.

► ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ಕಡಲೆ ಬೇಳೆಯಲ್ಲಿ ಸಾಕಷ್ಟು ಉತ್ತಮ ಪ್ರಮಾಣದಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ ವಿಟಾಮಿನ್‌ಗಳು ಕ್ಯಾಲ್ಸಿಯಂ ಹೀರುವಿಕೆಯಲ್ಲಿ ನೆರವಾಗುವುದರೊಂದಿಗೆ ಅಸ್ಥಿಮಜ್ಜೆ ರೂಪುಗೊಳ್ಳುವ ವ್ಯವಸ್ಥೆಯನ್ನೂ ಉತ್ತಮಗೊಳಿಸುತ್ತದೆ.

► ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಈ ಬೇಳೆಯಲ್ಲಿ ಸೋಡಿಯಂ ಕಡಿಮೆ ಪ್ರಮಾಣದಲ್ಲಿ ಮತ್ತು ಪೊಟ್ಯಾಷಿಯಂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ರಕ್ತದೊತ್ತಡದ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ರಕ್ತದೊತ್ತಡ ಮಟ್ಟವನ್ನು ಹೆಚ್ಚಿಸಬಲ್ಲ ಶರೀರದಲ್ಲಿಯ ನೀರನ್ನು ಸೋಡಿಯಂ ಹೀರಿಕೊಳ್ಳುತ್ತದೆ ಮತ್ತು ಪೊಟ್ಯಾಷಿಯಂ ಸೋಡಿಯಮ್‌ನ ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

► ಅರಿವಿನ ಶಕ್ತಿಯನ್ನು ಹೆಚ್ಚಿಸುತ್ತದೆ

ಕಡಲೆ ಬೇಳೆಯಲ್ಲಿ ನೈಸರ್ಗಿಕವಾಗಿ ಸಮೃದ್ಧ ಪ್ರಮಾಣದಲ್ಲಿರುವ ಕೋಲಿನ್ ನರಕೋಶಗಳನ್ನು ಪೋಷಿಸುತ್ತದೆ ಮತ್ತು ಒತ್ತಡಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ನಿಯಮಿತವಾಗಿ ಕಡಲೆ ಬೇಳೆಯನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ಮತ್ತು ಕಲಿಕೆಯ ಸಾಮರ್ಥ್ಯ ಸೇರಿದಂತೆ ಮಿದುಳಿನ ಕಾರ್ಯನಿರ್ವಹಣೆಯು ಉತ್ತಮಗೊಳ್ಳುತ್ತದೆ.

► ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

 ಕಡಲೆ ಬೇಳೆಯಲ್ಲಿ ಸಮೃದ್ಧವಾಗಿರುವ ನಾರು,ಪೊಟ್ಯಾಷಿಯಂ ಮತ್ತು ವಿಟಾಮಿನ್ ಸಿ ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಇದರೊಂದಿಗೆ ಅದರಲ್ಲಿರುವ ಮ್ಯಾಗ್ನೀಷಿಯಂ ಮತ್ತು ಫಾಲೇಟ್‌ಗಳು ರಕ್ತ ನಾಳಗಳನ್ನು ಸದೃಢಗೊಳಿಸುತ್ತವೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತವೆ.

► ಕ್ಯಾನ್ಸರ್‌ನ್ನು ತಡೆಯುತ್ತದೆ

ಇದರಲ್ಲಿರುವ ಸೆಲೆನಿಯಂ ಶರೀರದಲ್ಲಿ ಕ್ಯಾನ್ಸರ್‌ಕಾರಕ ಸಂಯುಕ್ತಗಳ ಹರಡುವಿಕೆಯನ್ನು ತಡೆಯುತ್ತದೆ. ಈ ಖನಿಜಾಂಶವು ಫ್ರೀ ರ್ಯಾಡಿಕಲ್‌ಗಳಂತಹ ಸಂಯುಕ್ತಗಳನ್ನು ನಂಜುಮುಕ್ತಗೊಳಿಸುತ್ತದೆ ಹಾಗೂ ಸಂಭಾವ್ಯ ಉರಿಯೂತ ಮತ್ತು ಟ್ಯೂಮರ್ ಬೆಳವಣಿಗೆಯನ್ನು ತಡೆಯುತ್ತದೆ. ಬೇಳೆಯಲ್ಲಿರುವ ಫಾಲೇಟ್ ಕೂಡ ಕ್ಯಾನ್ಸರ್ ಕೋಶಗಳ ವಿಭಜನೆ ಮತ್ತು ಹರಡುವಿಕೆಯನ್ನು ತಡೆಯಲು ನೆರವಾಗುತ್ತದೆ.

► ದೇಹತೂಕವನ್ನು ಇಳಿಸಲು ನೆರವಾಗುತ್ತದೆ

ಕಡಲೆ ಬೇಳೆಯಲ್ಲಿ ವಿಫುಲವಾಗಿರುವ ನಾರು ಶರೀರದ ತೂಕವನ್ನು ಇಳಿಸಿಕೊಳ್ಳುವಲ್ಲಿ ನೈಸರ್ಗಿಕ ನೆರವು ನೀಡುತ್ತದೆ. ನಾರು ಹೊಟ್ಟೆ ತುಂಬಿದಂತಹ ಅನುಭವವನ್ನುಂಟು ಮಾಡುವ ಮೂಲಕ ಹಸಿವನ್ನು ನಿಯಂತ್ರಿಸುತ್ತದೆ. ಇದರಲ್ಲಿ ಸಮೃದ್ಧವಾಗಿರುವ ಪ್ರೋಟಿನ್ ಕೂಡ ದೇಹತೂಕವನ್ನು ಇಳಿಸಲು ನೆರವಾಗುತ್ತದೆ.

► ಮಹಿಳೆಯರಲ್ಲಿ ಹಾರ್ಮೋನ್‌ಗಳ ಮಟ್ಟವನ್ನು ಸಮತೋಲನಗೊಳಿಸುತ್ತದೆ

ಕಡಲೆ ಬೇಳೆಯಲ್ಲಿ ಫೈಟೊನ್ಯೂಟ್ರಿಯಂಟ್‌ಗಳು ಉತ್ತಮ ಪ್ರಮಾಣದಲ್ಲಿದ್ದು,ಇವು ಸ್ತನ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುತ್ತವೆ. ಅವು ರಕ್ತದಲ್ಲಿ ಈಸ್ಟ್ರೋಜೆನ್ ಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಅಸ್ಥಿರಂಧ್ರತೆಯ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ಕಡಲೆ ಬೇಳೆಯು ಮಹಿಳೆಯರು ರಜಸ್ವಲೆಯರಾದಾಗ ಮತ್ತು ಋತುಬಂಧದ ನಂತರದ ಹಂತದಲ್ಲಿ ಮನಃಸ್ಥಿತಿಯಲ್ಲಿನ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಅದು ಋತುಸ್ರಾವದ ಸಂದರ್ಭದಲ್ಲಿಯ ಹೊಟ್ಟೆನೋವನ್ನೂ ಕಡಿಮೆ ಮಾಡುತ್ತದೆ.

► ಮೂತ್ರಪಿಂಡ ಮತ್ತು ಮೂತ್ರಕೋಶ ಕಲ್ಲುಗಳನ್ನು ನಿವಾರಿಸುತ್ತದೆ

ಕಡಲೆ ಬೇಳೆಯಲ್ಲಿನ ಮೂತ್ರವರ್ಧಕ ಗುಣವು ಮೂತ್ರಪಿಂಡ ಮತ್ತು ಮೂತ್ರಕೋಶಗಳಲ್ಲಿ ಉಂಟಾಗುವ ಕಲ್ಲುಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಕಡಲೆ ಬೇಳೆಯನ್ನು ನಿಯಮಿತವಾಗಿ ಸೇವಿಸುವದರಿಂದ ಈ ಕಲ್ಲುಗಳು ಹೊರತಳ್ಳಲ್ಪಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News