ರಾಜಸ್ತಾನ ಜಮೀನು ಪ್ರಕರಣದ ತನಿಖೆ: ರಾಬರ್ಟ್ ವಾದ್ರಾ ಹಾಜರಾತಿಗೆ ಇಡಿ ಸೂಚನೆ
ಹೊಸದಿಲ್ಲಿ, ಡಿ.1: ರಾಜಸ್ತಾನದಲ್ಲಿ ಜಮೀನು ಪ್ರಕರಣದ ಹಿನ್ನೆಲೆಯಲ್ಲಿ ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ನಡೆಯುತ್ತಿರುವ ಹಣ ಅಕ್ರಮ ಸಾಗಣೆ ಪ್ರಕರಣದ ತನಿಖೆಯಲ್ಲಿ ವಾದ್ರಾ ಹಾಜರಾತಿಗೆ ಜಾರಿ ನಿರ್ದೇಶನಾಲಯ(ಇಡಿ) ಸೂಚಿಸಿದೆ.
ಈ ತನಿಖೆಯ ಸಂಬಂಧ ವಾದ್ರಾಗೆ ಎರಡನೇ ಬಾರಿ ಸಮನ್ಸ್ ನೀಡಲಾಗಿದೆ. ನವೆಂಬರ್ ಆರಂಭದಲ್ಲಿ ಜಾರಿಗೊಳಿಸಿದ್ದ ಮೊದಲನೇ ಸಮನ್ಸ್‌ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಹಿರಿಯ ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾನೂನನ್ನು ಉಲ್ಲಂಘಿಸಿ ವಾದ್ರಾರ ಸಂಸ್ಥೆಯು ಬಿಕಾನೇರ್‌ನಲ್ಲಿ ಜಮೀನು ವ್ಯವಹಾರ ನಡೆಸಿದೆ ಎಂದು ಕಳೆದ ವರ್ಷದ ಆಗಸ್ಟ್‌ನಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಈ ಎಫ್‌ಐಆರ್ ಆಧಾರದಲ್ಲಿ ವಾದ್ರಾ ವಿರುದ್ಧ ದಾಖಲಾಗಿರುವ ಅಕ್ರಮ ಹಣ ಸಾಗಣೆ ಆರೋಪದ ತನಿಖೆಯನ್ನು ಇಡಿ ನಡೆಸುತ್ತಿದೆ. ಜಾರಿ ನಿರ್ದೇಶನಾಲಯದ ಈ ಕ್ರಮವನ್ನು ಕಾಂಗ್ರೆಸ್ ಖಂಡಿಸಿದೆ.
ಬಿಜೆಪಿಯು ಇಡಿ ಹಾಗೂ ಐಟಿ(ಆದಾಯ ತೆರಿಗೆ) ಇಲಾಖೆಯನ್ನು ‘ಡರ್ಟಿ ಟ್ರಿಕ್ಸ್’ ಇಲಾಖೆಯನ್ನಾಗಿಸಿದೆ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟೀಕಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಈ ತನಿಖಾ ಏಜೆನ್ಸಿಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ. ಇಂತಹ ಆಧಾರವಿಲ್ಲದ ಸುದ್ದಿಗಳನ್ನು ಜನತೆ ನಂಬುವುದಿಲ್ಲ ಎಂದು ಹೇಳಿದ್ದಾರೆ. ರಾಜಸ್ತಾನದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಈ ನಾಟಕ ಆಡುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ತನಿಖೆಗೆ ತಾನು ಸಹಕರಿಸಿದ್ದರೂ ಇದೀಗ ಅನಗತ್ಯವಾಗಿ ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ವಾದ್ರಾ ತನ್ನ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ, ವಾದ್ರಾ ಗಾಂಧಿ ಕುಟುಂಬದ ಓರ್ವ ದೊಡ್ಡ ರೈತನಾಗಿದ್ದು, ತನ್ನ ಜಮೀನಿನಲ್ಲಿ ತೊಗರಿ ಮತ್ತು ಉದ್ದು ಬೆಳೆಯುವ ಬದಲು ಹಣವನ್ನೇ ಬೆಳೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.