ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ: ಚಂದ್ರಶೇಖರ್ ಆಝಾದ್

Update: 2018-12-01 17:27 GMT

ಮುಝಪ್ಫರ್‌ನಗರ್ (ಉತ್ತಪ್ರದೇಶ), ಡಿ. 1: ದಲಿತರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಹಾಗೂ ಈ ವರ್ಷದ ಆರಂಭದಲ್ಲಿ ನಡೆದ ಚಳವಳಿಯ ಸಂದರ್ಭ ದಲಿತ ಸಮುದಾಯದ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂದೆ ತೆಗೆದುಕೊಳ್ಳುವಂತೆ ಆಗ್ರಹಿಸಿ ತಾನು ದೇಶವ್ಯಾಪಿ ಚಳವಳಿ ಆರಂಭಿಸಲಿದ್ದೇನೆ ಎಂದು ಭೀಮ ಆರ್ಮಿಯ ವರಿಷ್ಠ ಚಂದ್ರಶೇಖರ್ ಆಝಾದ್ ಹೇಳಿದ್ದಾರೆ. ಉತ್ತರಪ್ರದೇಶದ ಮುಝಪ್ಫರನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಸಂದರ್ಭ ಭೀಮ ಸೇನೆ ಕಾರ್ಯಕರ್ತರನ್ನು ಉದ್ದೇಶಿಸಿ ಆಝಾದ್ ಮಾತನಾಡಿದರು. ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅಮಾಯಕ ದಲಿತರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ. ಎಪ್ರಿಲ್ 2ರಂದು ನಡೆದ ಭಾರತ್ ಬಂದ್ ಸಂದರ್ಭ ಸಮುದಾಯದ ಸದಸ್ಯರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದೆ ಎಂದು ಅವರು ಹೇಳಿದರು.

ಪ.ಜಾ., ಪ.ಪಂ. ದೌರ್ಜನ್ಯ ಕಾಯ್ದೆ ಅಡಿಯಲ್ಲಿ ತತ್‌ಕ್ಷಣ ಬಂಧಿಸುವುದನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಮಾರ್ಚ್‌ನಲ್ಲಿ ನೀಡಿದ ತೀರ್ಪು ವಿರೋಧಿಸಿ ಕೆಲವು ದಲಿತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದವು. ಈ ಸಂದರ್ಭ ನಡೆದ ಹಿಂಸಾಚಾರದಲ್ಲಿ 12 ಮಂದಿ ಸಾವನ್ನಪ್ಪಿದ್ದರು. ದಲಿತ ಚಳವಳಿ ಸಂದರ್ಭ ದಾಖಲಿಸಲಾದ ಪ್ರಕರಣಗಳನ್ನು ಹಿಂದೆ ತೆಗೆಯುವಂತೆ ಹಾಗೂ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರ ಧನ ನೀಡುವಂತೆ ಆಝಾದ್ ಆಗ್ರಹಿಸಿದ್ದಾರೆ. ದಲಿತರ ಮೇಲಿನ ದೌರ್ಜನ್ಯ ವಿರುದ್ಧ ರಾಷ್ಟ್ರವ್ಯಾಪಿ ಚಳವಳಿ ನಡೆಸಲಾಗುವುದು. ನಮ್ಮ ಚಳವಳಿಯನ್ನು ಮುಝಪ್ಫರ್‌ನಗರದಿಂದ ಮುಂದಿನ ಶನಿವಾರದಿಂದ ಆರಂಭಿಸಲಾಗುವುದು ಎಂದು ಭೀಮ ಸೇನೆ ವರಿಷ್ಠ ಚಂದ್ರಶೇಖರ್ ಆಝಾದ್ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News