ದಿಲ್ಲಿ: ಆರೆಸ್ಸೆಸ್ ನ ರಾಮಮಂದಿರ ರ‍್ಯಾಲಿಗೆ ನೀರಸ ಆರಂಭ
ಹೊಸದಿಲ್ಲಿ,ಡಿ.1: ಅಯೋಧ್ಯೆಯಲ್ಲಿ ಶೀಘ್ರ ರಾಮ ಮಂದಿರ ನಿರ್ಮಾಣಕ್ಕೆ ಒತ್ತು ನೀಡಲು ಆರೆಸ್ಸೆಸ್ ಹಮ್ಮಿಕೊಂಡಿರುವ ಸಂಕಲ್ಪ ಯಾತ್ರೆ ಶನಿವಾರ ದಿಲ್ಲಿಯಲ್ಲಿ ಅತ್ಯಂತ ನೀರಸವಾಗಿ ಆರಂಭಗೊಂಡಿತು. ಲಕ್ಷಾಂತರ ಜನರು ಸೇರಲಿದ್ದಾರೆ ಎಂದು ಸಂಘಟಕರು ನಿರೀಕ್ಷಿಸಿದ್ದರಾದರೂ ಯಾತ್ರೆಯನ್ನು ಬೆಂಬಲಿಸಲು ಸೇರಿದ್ದ ಕಾರ್ಯಕರ್ತರ ಸಂಖ್ಯೆಯು ನೂರನ್ನೂ ತಲುಪಿರಲಿಲ್ಲ!
ಇಲ್ಲಿಯ ಝಂಡೇವಾಲಾ ಮಂದಿರದಿಂದ ಆರಂಭಗೊಂಡ ಸಂಕಲ್ಪ ಯಾತ್ರೆಯು ಒಂಭತ್ತು ದಿನಗಳ ಕಾಲ ನಡೆಯಲಿದ್ದು,ಡಿ.9ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ. ಸಂಘ ಪರಿವಾರ ಸಂಘಟನೆ ಸ್ವದೇಶಿ ಜಾಗರಣ ಮಂಚ್ ಈ ಯಾತ್ರೆಯನ್ನು ಸಂಘಟಿಸಿದೆ.
ನಿರ್ದಿಷ್ಟ ವಿಭಾಗದಿಂದ ಕೆಲವೇ ಕಾರ್ಯಕರ್ತರು ಇಂದು ಸೇರಿದ್ದಾರೆ. ಶೀಘ್ರವೇ ಇನ್ನೊಂದು ವಿಭಾಗದ ನೂರಿನ್ನೂರು ಕಾರ್ಯಕರ್ತರು ಅವರನ್ನು ಸೇರಿಕೊಳ್ಳಲಿದ್ದಾರೆ. ಕ್ರಮೇಣ ವಿವಿಧ ಭಾಗಗಳ ನೂರಾರು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಚ್‌ನ ಸಹ ಸಂಚಾಲಕ ಕಮಲ್ ತಿವಾರಿ ಸಮಜಾಯಿಷಿ ನೀಡಿದರು. ರ್ಯಾಲಿಯ ಅಂತಿಮ ದಿನ ರಾಮಲೀಲಾ ಮೈದಾನದಲ್ಲಿ ಆರರಿಂದ ಎಂಟು ಲಕ್ಷ ಜನರು ಸೇರುತ್ತಾರೆ ಎಂದು ತಾನು ನಿರೀಕ್ಷಿಸಿರುವುದಾಗಿ ಅವರು ಹೇಳಿದರು. ರ್ಯಾಲಿಯು ರಾತ್ರಿ ಶಾದಿಪುರ ಡಿಪೋವನ್ನು ತಲುಪಿದ್ದು,ರವಿವಾರ ಬೆಳಿಗ್ಗೆ ಮುಂದುವರಿಯಲಿದೆ. ಆದರೆ ಶಾದಿಪುರವನ್ನು ತಲುಪಿದಾಗಲೂ ಕಾರ್ಯಕರ್ತರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿರಲಿಲ್ಲ.