ಹರ್ಯಾಣದ ಮಾಜಿ ಸಿಎಂ ಹೂಡಾ, ಮೋತಿಲಾಲ್ ವೊಹ್ರಾ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಕೆ
ಹೊಸದಿಲ್ಲಿ, ಡಿ. 1: ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ಗೆ ಹರ್ಯಾಣ ಹಾಗೂ ಪಂಚಕುಲದಲ್ಲಿ ಸಾಂಸ್ಥಿಕ ನಿವೇಶನ ಮರು ಮಂಜೂರು ಮಾಡಿರುವಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಕಾಂಗ್ರೆಸ್ ನಾಯಕ ಮೋತಿಲಾಲ್ ವೊಹ್ರಾ ಅವರ ವಿರುದ್ಧ ಸಿಬಿಐ ಆರೋಪ ಪಟ್ಟಿ ದಾಖಲಿಸಿದೆ.
ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಿರುವ ಸಿಬಿಐ, ಸಿ-17 ನಿವೇಶನವನ್ನು ಮರು ಮಂಜೂರು ಮಾಡಿರುವುದರಿಂದ ಸರಕಾರದ ಬೊಕ್ಕಸಕ್ಕೆ 67 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅದು ಹೇಳಿದೆ. ಹರ್ಯಾಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಹರ್ಯಾಣದ ಮುಖ್ಯಮಂತ್ರಿ ಹೂಡ ಹಾಗೂ ಎಜೆಎಲ್‌ನ ಅಧ್ಯಕ್ಷರಾಗಿದ್ದ ವೋರಾ ವಿರುದ್ಧ ಕ್ರಿಮಿನಲ್ ಸಂಚು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.
1982ರಲ್ಲಿ ಎಜೆಎಲ್ ಪಂಚಕುಲದಲ್ಲಿ ನಿವೇಶನವೊಂದನ್ನು ಮಂಜೂರು ಮಾಡಿತ್ತು. ಅಲ್ಲಿ 1992ರ ವರೆಗೆ ಯಾವುದೇ ರೀತಿಯ ನಿರ್ಮಾಣ ಕಾಮಗಾರಿ ನಡೆಯಲಿಲ್ಲ ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ಹೇಳಿದೆ. ಹರ್ಯಾಣ ನಗರಾಭಿವೃದ್ಧಿ ಪ್ರಾಧಿಕಾರ ತರುವಾಯ ಆ ನಿವೇಶನವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಆದರೆ, ಇದೇ ನಿವೇಶನವನ್ನು 2005ರಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಮೂಲ ಬೆಲೆಯಲ್ಲೇ ಹರ್ಯಾಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೂಡ ಎಜೆಎಲ್‌ಗೆ ಮರು ಮಂಜೂರು ಮಾಡಿದ್ದರು ಎಂದು ಆರೋಪ ಪಟ್ಟಿ ತಿಳಿಸಿದೆ. ಎಜೆಎಲ್ ಗಾಂಧಿ ಕುಟುಂಬದ ಸದಸ್ಯರು ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರ ನಿಯಂತ್ರಣದಲ್ಲಿ ಇದೆ. ಈ ಸಮೂಹ ‘ನ್ಯಾಶನಲ್ ಹೆರಾಲ್ಡ್’ ದಿನಪತ್ರಿಕೆ ನಡೆಸುತ್ತಿದೆ.