×
Ad

ಲೈಂಗಿಕ ಕಿರುಕುಳ ದೂರು ದಾಖಲಿಸಲು ಠಾಣೆಗೆ ತೆರಳುತ್ತಿದ್ದ ಯುವತಿಗೆ ಬೆಂಕಿ ಹಚ್ಚಿದ ಆರೋಪಿಗಳು

Update: 2018-12-03 12:22 IST

ಲಕ್ನೋ, ಡಿ.3: ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಇಬ್ಬರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳುತ್ತಿದ್ದ ಯುವತಿಯನ್ನು ಆರೋಪಿಗಳು ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿದ ಘಟನೆ ಶನಿವಾರ ಸೀತಾಪುರದಿಂದ ವರದಿಯಾಗಿದೆ.

ದಾಳಿಯಲ್ಲಿ ಶೇ.60ರಷ್ಟು ಸುಟ್ಟ ಗಾಯಗಳುಂಟಾಗಿರುವ ಯುವತಿ ಇದೀಗ ಸೀತಾಪುರ ಜಿಲ್ಲಾಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

 ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಮೊದಲ ಬಾರಿ ಪೊಲೀಸ್ ದೂರು ನೀಡಲು ತೆರಳಿದಾಗ ದೂರು ದಾಖಲಿಸಲು ನಿರಾಕರಿಸಿದ ಕಾರಣ ಆಕೆ ಶನಿವಾರ ಎರಡನೇ ಬಾರಿ ಪೊಲೀಸ್ ಠಾಣೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಯುವತಿಯ ಹೇಳಿಕೆಯ ಆಧಾರದಲ್ಲಿ ಆರೋಪಿಗಳಾದ ರಾಜೇಶ್ ಹಾಗೂ ರಾಮು ಎಂಬವರನ್ನು ರವಿವಾರ ಬಂಧಿಸಲಾಗಿದೆ. ಅವರಿಬ್ಬರೂ ಸೋದರರಾಗಿದ್ದಾರೆ.

ಸಂತ್ರಸ್ತೆ ಹಾಗೂ ಆರೋಪಿಗಳು ದಲಿತರಾಗಿದ್ದಾರೆ. ಮಹಿಳೆ ಮೊದಲ ಬಾರಿ ದೂರು ನೀಡಲು ಬಂದಾಗ ದೂರು ಸ್ವೀಕರಿಸದ ಮುಖ್ಯ ಪೇದೆ ಚೇಡಿಲಾಲ್ ಎಂಬಾತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ತಂಬೊರ್ ಠಾಣಾಧಿಕಾರಿ ಓಂ ಪ್ರಕಾಶ್ ಸರೋಜ್ ಆವರನ್ನೂ ಕರ್ತವ್ಯಲೋಪ ಆರೋಪದ ಮೇಲೆ ವಜಾಗೊಳಿಸಲಾಗಿದೆ.

ನವೆಂಬರ್ 29ರಂದು ಯುವತಿ ನೆರೆಯ ಗ್ರಾಮದಲ್ಲಿರುವ ತನ್ನ ಅತ್ತೆ ಮನೆಗೆ ತೆರಳುತ್ತಿದ್ದಾಗ ಇಬ್ಬರು ಆರೋಪಿಗಳು ಆಕೆಯನ್ನು ಅಡ್ಡಗೈದು ಅಶ್ಲೀಲ ಪದ ಉಪಯೋಗಿಸಿ ನಿಂದಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದರು. ಅವರಿಂದ ತಪ್ಪಿಸಿಕೊಂಡು ಸ್ಥಳೀಯರ ಸಹಾಯದಿಂದ ತಂಬೊರ್ ಠಾಣೆಗೆ ತೆರಳಿದರೂ ಅಲ್ಲಿ ಕರ್ತವ್ಯದಲ್ಲಿದ್ದವರು ಆಕೆಯನ್ನು ವಾಪಸ್ ಕಳುಹಿಸಿದ್ದರು.

ನಂತರ ಅತ್ತೆ ಮನೆಗೆ ತೆರಳಿದ ಆಕೆ ಘಟನೆ ಬಗ್ಗೆ ವಿವರಿಸಿದ್ದಳು. ಮರುದಿನ ಅವರು ಯುಪಿ100ಗೆ ಈ ಘಟನೆ ಬಗ್ಗೆ ತಿಳಿಸಿದಾಗ ಪೊಲೀಸರು ಆಕೆಯ ನಿವಾಸಕ್ಕೆ ಬಂದು ಲಿಖಿತ ದೂರನ್ನು ತಂಬೊರ್ ಠಾಣೆಯಲ್ಲಿ ದಾಖಲಿಸುವಂತೆ ಹೇಳಿ ತೆರಳಿದ್ದರು. ಡಿಸೆಂಬರ್ 1ರಂದು ಯುವತಿ ಠಾಣೆಗೆ ತೆರಳುತ್ತಿದ್ದಾಗ ಕಬ್ಬು ತೋಟದ ಸಮೀಪ ಆಕೆಯನ್ನು ತಡೆದ ಆರೋಪಿಗಳು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಆಕೆಯ ಬೊಬ್ಬೆ ಕೇಳಿ ಗ್ರಾಮಸ್ಥರು ಧಾವಿಸಿ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News