ನೀರವ್ ಮೋದಿ ಹಗರಣ: 8 ತಿಂಗಳ ಹಿಂದೆಯೇ ಎಚ್ಚರಿಸಿದ್ದ ಐಟಿ ತನಿಖಾ ವರದಿಯನ್ನು ಗೌಪ್ಯವಾಗಿಡಲಾಗಿತ್ತು

Update: 2018-12-03 08:01 GMT

ಮುಂಬೈ, ಡಿ.3: ಜೂನ್ 8, 2017ರಂದು ಅಂತಿಮಗೊಳಿಸಲಾದ ಮಹತ್ವದ ಆದಾಯ ತೆರಿಗೆ ತನಿಖಾ ವರದಿಯೊಂದು ಸ್ಫೋಟಕ ಮಾಹಿತಿ ಹೊರಗೆಡಹಿದೆ. ಬೋಗಸ್ ಖರೀದಿ, ಸಂಬಂಧಿಗಳಿಗೆ ಶಂಕಾಸ್ಪದ ಹಣ ಪಾವತಿ, ಶಂಕಾಸ್ಪದ ಸಾಲಗಳು, ಹೀಗೆ ವಜ್ರೋದ್ಯಮಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಯ ವ್ಯವಹಾರಗಳತ್ತ ಪಿಎನ್‍ ಬಿ ಹಗರಣ ಹೊರ ಬೀಳುವ ಎಂಟು ತಿಂಗಳು ಮುನ್ನವೇ  ಬೊಟ್ಟು ಮಾಡಿ ತೋರಿಸಿತ್ತೆನ್ನುವ ಅಂಶ ಈಗ ಬಹಿರಂಗಗೊಂಡಿದೆ.

ಆದರೆ ಆ ಐಟಿ ತನಿಖಾ ವರದಿಯನ್ನು ಇತರ ಯಾವುದೇ ಏಜನ್ಸಿ ಜತೆ ಹಂಚಿಕೊಳ್ಳಲಾಗಿರಲಿಲ್ಲ. ಈ ತನಿಖಾ ವರದಿ ಸುಮಾರು 10,000 ಪುಟಗಳಷ್ಟಿದ್ದು ಅದರಲ್ಲಿನ ಮಾಹಿತಿಯನ್ನು ಸಿಬಿಐ, ಜಾರಿ ನಿರ್ದೇಶನಾಲಯ, ಡಿಆರ್‍ಐ ಅಥವಾ  ಗಂಭೀರ ವಂಚನಾ ಪ್ರಕರಣಗಳ ತನಿಖಾ ಕಚೇರಿಗಗೂ (ಎಸ್‍ಎಫ್‍ಐಒ) ಫೆಬ್ರವರಿ 2018ರ ತನಕ ನೀಡಲಾಗಿರಲಿಲ್ಲ. ಹಗರಣ ಬಹಿರಂಗಗೊಂಡ ಫೆಬ್ರವರಿ 2018ಕ್ಕಿಂತ ಮೊದಲು ರೀಜನಲ್ ಇಕನಾಮಿಕ್ ಇಂಟಲಿಜೆನ್ಸ್ ಕೌನ್ಸಿಲ್‍ಗೂ ಮಾಹಿತಿ ನೀಡಲಾಗಿರಲಿಲ್ಲ.

ಇದೀಗ ಪಿಎಎನ್ ಬಿ ಹಗರಣ ಹೊರಬಿದ್ದ ಹತ್ತು ತಿಂಗಳ ನಂತರ ಭಾರತ ಸರಕಾರ ಮತ್ತದರ ಏಜನ್ಸಿಗಳು ನೀರವ್ ಮೋದಿಯನ್ನು ಭಾರತಕ್ಕೆ ತನಿಖೆ ಎದುರಿಸಲು ಕರೆ ತರಲು ಹೆಣಗಾಡುತ್ತಿವೆ. ಆದರೆ ಇಲ್ಲಿಯ ತನಕ ಎಲ್ಲಾ ಪ್ರಯತ್ನಗಳೂ ವ್ಯರ್ಥವಾಗಿವೆ. ಐಟಿ ತನಿಖಾ ವರದಿಯನ್ನು ಮೊದಲೇ ಇತರ ಏಜನ್ಸಿಗಳಿಗೆ ತಿಳಿಸಿದ್ದರೆ ರೂ 13,500 ಕೋಟಿ ವಂಚನೆ ಪ್ರಕರಣದಲ್ಲಿನ ಆರೋಪಿಗಳು ತಪ್ಪಿಸಿ ಹೋಗುವ ಸಾಧ್ಯತೆಯಿರಲಿಲ್ಲ.

ಇಂತಹ ತನಿಖಾ ವರದಿಗಳಲ್ಲಿನ ಮಾಹಿತಿಗಳನ್ನು ಇತರ ಏಜನ್ಸಿಗಳೊಂದಿಗೆ ಹಂಚಿಕೊಳ್ಳಬೇಕೆಂಬ ಯಾವುದೇ ನಿಯಮವಿಲ್ಲ ಎಂದು ಹಿರಿಯ ತೆರಿಗೆ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News