ಜೆಟ್ ಏರ್‌ವೇಸ್‌ನ 14 ವಿಮಾನಗಳ ಹಾರಾಟ ರದ್ದು

Update: 2018-12-03 16:00 GMT

ಮುಂಬೈ, ಡಿ. 3: ವೇತನ ಪಾವತಿಸದ ಹಿನ್ನೆಲೆಯಲ್ಲಿ ಪೈಲೆಟ್‌ಗಳು ದೂರವಾಣಿ ಕರೆ ಮಾಡಿ ಅನಾರೋಗ್ಯದ ಕಾರಣ ಮುಂದೊಡ್ಡಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ ಬಳಿಕ ಭಾರತದಲ್ಲಿ ಅತಿ ದೊಡ್ಡ ವೈಮಾನಿಕ ಸೇವೆ ನೀಡುತ್ತಿರುವ ಜೆಟ್ ಏರ್‌ವೇಸ್ ತನ್ನ 14 ವಿಮಾನಗಳ ಹಾರಾಟ ರದ್ದುಗೊಳಿಸಿದೆ.

ನಷ್ಟದಲ್ಲಿ ನಡೆಯುತ್ತಿರುವ ಜೆಟ್ ಏರ್‌ವೇಸ್ ಹಣದ ಕೊರತೆಯಿಂದ ತನ್ನ ಹಿರಿಯ ಆಡಳಿತಾಧಿಕಾರಿ, ಪೈಲೆಟ್ ಹಾಗೂ ಎಂಜಿನಿಯರ್‌ಗಳಿಗೆ ಕಳೆದ ಆಗಸ್ಟ್‌ನಿಂದ ವೇತನ ನೀಡಿಲ್ಲ. ಜೆಟ್ ಏರ್‌ವೇಸ್ ಈ ಸಿಬ್ಬಂದಿಗೆ ಸೆಪ್ಟಂಬರ್ ತಿಂಗಳ ಅರ್ಧ ವೇತನ ನೀಡಿದೆ. ಆದರೆ, ಅಕ್ಟೋಬರ್ ಹಾಗೂ ನವೆಂಬರ್‌ನ ವೇತನ ನೀಡಿಲ್ಲ. ‘‘ಪೈಲೆಟ್‌ಗಳು ಅನಾರೋಗ್ಯ ಎಂದು ಹೇಳಿದ ಕಾರಣಕ್ಕೆ ಕನಿಷ್ಠ 14 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ವೇತನ ಪಾವತಿಸದೇ ಇರುವುದಕ್ಕೆ ಹಾಗೂ ಈ ವಿಷಯವನ್ನು ಆಡಳಿತ ಮಂಡಳಿಗೆ ತಲುಪಿಸದೇ ಇರುವ ನ್ಯಾಶನಲ್ ಏವಿಯೇಟರ್ ಗಿಲ್ಡ್‌ನ ನಡತೆ ಬಗ್ಗೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ’’ ಎಂದು ಮೂಲಗಳು ತಿಳಿಸಿವೆ. ‘ಅನಿರೀಕ್ಷಿತ ಕಾರ್ಯಾಚರಣೆ ಸನ್ನಿವೇಶ’ದಿಂದ ಹಾಗೂ ಪೈಲೆಟ್‌ಗಳ ಪ್ರತಿಭಟನೆಯಿಂದ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ ಎಂದು ಜೆಟ್ ಏರ್‌ವೇಸ್ ತಿಳಿಸಿದೆ. ಈ ರೀತಿಯಾಗಿ ಕೆಲಸ ಮಾಡಲು ನಾವು ಇಚ್ಚಿಸುತ್ತಿಲ್ಲ ಎಂದು ಕೆಲವು ಪೈಲೆಟ್‌ಗಳು ಜೆಟ್ ಏರ್‌ವೇಸ್‌ನ ಅಧ್ಯಕ್ಷ ನರೇಶ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News